ಮತದಾನದ ಹಕ್ಕಿನ ರಕ್ಷಣೆ ಹಾಗೂ ಚುನಾವಣಾ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಡಿಕೇರಿಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮತದಾನದ ಹಕ್ಕಿನ ರಕ್ಷಣೆ ಹಾಗೂ ಚುನಾವಣಾ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಡಿಕೇರಿಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ವಕೀಲ ಜುನೈದ್ ಅವರು ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಚಾಲನೆ ನೀಡಿದರು. ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ನಗರ ಪೊಲೀಸ್ ಠಾಣೆ, ಮಂಗೇರಿರ ಮುತ್ತಣ್ಣ ಮೂಲಕ ಜನರಲ್ ತಿಮ್ಮಯ್ಯ ವೃತ್ತದತ್ತ ಮೆರವಣಿಗೆ ಸಾಗಲು ಮುಂದಾದಾಗ ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಜನರಲ್ ತಿಮ್ಮಯ್ಯ ವೃತ್ತದತ್ತ ಮೆರವಣಿಗೆ ಸಾಗಿದ ಪ್ರತಿಭಟನಾ ನಿರತರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಯಾವುದೇ ಒಬ್ಬ ಮತದಾರನ ಹಕ್ಕನ್ನು ಮತದಾರನ ಪಟ್ಟಿಯಿಂದ ಡಿಲೀಟ್ ಮಾಡಬೇಕಾದರೆ ನೋಟಿಸ್ ನೀಡಬೇಕು. ಅಥವಾ ಪರಿಶೀಲನೆ ಮಾಡಬೇಕು. ಆದರೆ, ಇವೆರೆಡು ನಡೆಯದ ಪರಿಣಾಮ ದೇಶದಲ್ಲಿ 13 ಕೋಟಿ ಜನರ ಮತದಾನವನ್ನು ಕಳೆದುಕೊಂಡಿದ್ದಾರೆ ಎಂದ ಅವರು,ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನರನ್ನು ಎಸ್ಐಆರ್ನಿಂದ ಕೈಬಿಡಲಾಗಿದೆ. ಇದರಲ್ಲಿ 23 ಲಕ್ಷ ಮತದಾರರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದುವರೆಗೆ 1 ಲಕ್ಷ ಕಡತ ವಿಲೇವಾರಿ ಮಾಡಿದ ಸಂದರ್ಭ 93,000 ಜನರಿಗೆ ಮತದಾನ ಹಕ್ಕು ಲಭ್ಯವಾಗಿದೆ. ಇದೇ ರೀತಿ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮಾತ್ರ ಎಸ್ಐಆರ್ ಜಾರಿಗೆ ತರಲಾಗಿದೆ ಎಂದರು.
ಎಸ್ಐಆರ್ ಸಂವಿಧಾನ ವಿರೋಧಿಯಾಗಿದೆ. ಪರಿಣಾಮ ಎಸ್ಐಆರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ರೀತಿ ಇಂದು ತಪ್ಪಾಗಿದೆ. ಅದನ್ನು ಸರಿಪಡಿಸಬೇಕು. ಚುನಾವಣಾ ಆಯೋಗದಲ್ಲಿ ಚೀಫ್ ಜಸ್ಟಿಸ್ ಕಡ್ಡಾಯವಾಗಿ ಇರಲೇ ಬೇಕು ಎಂದರು.ಮೋಸದ ದಾರಿಯಾಗಿದೆ:
ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಸಂಚಾಲಕ ನಿರ್ವಾಣಪ್ಪ ಮಾತನಾಡಿ, ಇಂದು ಎಸ್ಐಆರ್ ಮೂಲಕ ಸಂವಿಧಾನವನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಬಿಜೆಪಿಗೆ ಮತ ಹಾಕದವರನ್ನು ಕುತಂತ್ರದ ನೀತಿಯಿಂದ ಎಸ್ಐಆರ್ ಮುಖಾಂತರ ತೆಗೆಯುವ ಷಡ್ಯಂತ್ರ ನಡೆಯುತ್ತಿದೆ. ಇದು ಮೋಸದ ದಾರಿಯಾಗಿದೆ ಎಂದ ಅವರು, ಸಂವಿಧಾನಕ್ಕೆ ಅಪಚಾರ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸಂವಿಧಾನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ದೇಶದಲ್ಲಿ ಬಿಜೆಪಿ ಪತನಗೊಳ್ಳಬೇಕು. ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಸಹಕಾರ ಮಾಡಬೇಕು. ಮತ್ತು ಜಾಗೃತಿ ಮಾಡಿಸಬೇಕು ಎಂದರು.ಇಂದು ಗೂಂಡಾಗಿರಿ ತನಕ್ಕೆ ಪೊಲೀಸ್ ಇಲಾಖೆಯನ್ನು ಒಳಸಿಕೊಳ್ಳಲಾಗುತ್ತಿದೆ. ಇಂತಹ ಹೀನಾಯ ಸ್ಥಿತಿ ನಮ್ಮ ದೇಶದಲ್ಲಿದೆ ಎಂದು ಅವರು, ಕೊಡಗು ಜಿಲ್ಲೆಯಲ್ಲಿಯೂ ಓಟ್ ಚೋರಿಯಾಗಿದೆ ಎಂದರು.
ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ:ವೇದಿಕೆಯ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಜನರು ಇಂದು ಎಕತೆಯೊಂದಿಗೆ ಬೀದಿಗೆ ಇಳಿದಿದ್ದಾರೆ. ಆದರೆ, ಭಾರತದ ಧ್ವಜ ಹಿಡಿದು ಹೋರಾಟ ಮಾಡುವವರನ್ನು ಬಂಧನದಲ್ಲಿಡುವ ಕೆಲಸವಾಗುತ್ತಿದೆ. ಇದು ಖಂಡನೀಯ. ಜತೆಗೆ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕುತಂತ್ರದಿಂದ ಸುದೀರ್ಘವಾದ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಅಕ್ರಮವಾಗಿ ಫಾರಂ 7 ನೀಡಿದ ಬಿಎಲ್ಎಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಜಿಲ್ಲಾಡಳಿತ ಈ ಸಂಬಂಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು. ಜತೆಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮತದಾರರು ಪಾಠವನ್ನು ಕಲಿಸಬೇಕು ಎಂದರು.
ವೇದಿಕೆ ಸದಸ್ಯ ಹಮೀದ್ ಮೌಲವಿ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.ಇದೇ ಸಂದಂರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಮೊಹಮ್ಮದ್ ಹನೀಫ್, ಸದಸ್ಯರಾದ ಪ್ರೇಮ್ ಕುಮಾರ್, ಎಸ್ಡಿಪಿಐ ಮಾಜಿ ಅಧ್ಯಕ್ಷ ಅಬ್ದುಲ್ ಅಡ್ಕರ್, ಪ್ರಮುಖರಾದ ಕೆ.ಕೆ.ಮೊಣ್ಣಪ್ಪ, ಮನ್ಸೂರು ಆಲಿ, ಕೊಟ್ಟಮುಡಿ ಹಂಸ, ಜಾನ್ಸನ್ ಪಿಂಟೋ, ಬೋಜಣ್ಣ ಸೋಮಯ್ಯ ಹಾಗೂ ಆದಿವಾಸಿ ನಿವಾಸಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
