ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಸಾಲದ ಬಾಕಿಗಾಗಿ ರೈತರ ಜಮೀನನ್ನು ಹರಾಜು ಮಾಡುವುದನ್ನು ವಿರೋಧಿಸಿ ಮತ್ತು ರೈತನಿಗೆ ಜಮೀನು ಮರಳಿಸುವಂತೆ ಒತ್ತಾಯಿಸಿ ಕರ್ನಾಟಕ ಬ್ಯಾಂಕ್ ವಿರುದ್ಧ ಆ.೧೨ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಎದುರಿಸಿರುವ ರೈತರ ಬದುಕು ದುಸ್ತರವಾಗಿದೆ. ಜೀವನ ನಡೆಸುವುದೇ ಕಷ್ಟದ ಸಮಯದಲ್ಲಿ ಸಾಲದ ಬಾಧೆಯಿಂದ ರಾಜ್ಯದಲ್ಲಿ ಸುಮಾರು ೧೧೮೨ ಜನರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಬ್ಯಾಂಕ್‌ಗಳು ಜಪ್ತಿ ಮಾಡಲು ಕೋರ್ಟ್ ಆದೇಶ ಹಾಕುತ್ತಿದ್ದವು. ರೈತ ಸಂಘಗಳು ನಿರಂತರ ಹೋರಾಟದಿಂದ ಜಪ್ತಿ ನಿಂತಿದ್ದವು. ಈಗ ಕಾನೂನು ಮೂಲಕ ಆನ್ ಲೈನ್‌ನಲ್ಲಿ ರೈತರ ಜಮೀನು ಹರಾಜು ಮಾಡಿ ರೈತರನ್ನು ಬೀದಿಗೆ ತಳ್ಳುತ್ತಿವೆ ಎಂದು ಆರೋಪಿಸಿದರು. ತಾಲೂಕಿನ ತಾಳಕೆರೆ ಸರ್ವೆ ನಂ ೨೭೩. ೬ ಎಕರೆ ಜಮೀನಿನ ಮೇಲೆ ರೈತ ಈರಯ್ಯ ಕರ್ನಾಟಕ ಬ್ಯಾಂಕ್ ನಲ್ಲಿ ೪.೫ ಲಕ್ಷ ಸಾಲ ಪಡೆದಿದ್ದರು ಈಗ ಸಾಲದ ಮೇಲೆ ಬಡ್ಡಿ ಸೇರಿ ೩೪ ಲಕ್ಷ ೮೦ ಸಾವಿರ ರೂಗಳಿಗೆ ಡಿಕ್ರಿ ಮಾಡಿ ರೈತನ ಕುಟುಂಬಕ್ಕೆ ಆಧಾರವಾಗಿದ್ದ ಜಮೀನನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿದ್ದಾರೆ ಇದಕ್ಕೆ ಬ್ಯಾಂಕಿನ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ,ರಂಗಹನುಮಯ್ಯ, ನಾದೂರು ಕೆಂಚಪ್ಪ, ವೆಂಕಟಗೌಡರು, ಸಿ.ಜಿ.ಲೋಕೇಶ್, ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ತಾಲೂಕು ಗೌರವಾಧ್ಯಕ್ಷ ಅಸ್ಲಾಂ ಪಾಷಾ ರಹಮತ್, ನರಸಿಂಹಮೂರ್ತಿ, ಕಾಳೇಗೌಡ, ನಾಗರತ್ನಮ್ಮ, ಚನ್ನಬಸವಣ್ಣ, ಇದ್ದರು.