ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಬಿಜಿಎಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ, ರಾಜ್ಯ ಒಬಿಸಿ ಮುಖಂಡ ನೆ.ಲ.ನರೇಂದ್ರಬಾಬು, ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಗೃಹ ಸಚಿವರೇ, ಈ ರೀತಿ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೆ? ಕೊಲೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾದರೂ ಕೊಲೆ ನಡೆದು 24 ಗಂಟೆ ಕಳೆದರೂ ಕೊಲೆಗಾರರನ್ನು ಇನ್ನೂ ಬಂಧಿಸಿಲ್ಲ, ಅಸಮರ್ಥ ಸರ್ಕಾರ ಎಂದರು.ಧರ್ಮದ ಆಧಾರದಲ್ಲಿ ಕೊಲೆ ನಡೆಯುತ್ತಿವೆ ಎಂದರೆ ಸರ್ಕಾರ ಎಚ್ಚೆತ್ತುಕೊಂಡು ತಡೆಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಸರ್ಕಾರ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲ, ಮತ ಬ್ಯಾಂಕಿಗಾಗಿ ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ಬರುತ್ತಿದೆ. ಆ ಸಂಚಿನ ಹಿಂದೆ ಇರುವವರನ್ನು ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ, ಹಿಂದೂಗಳ ಮಾರಣಹೋಮ ನಡೆಯುತ್ತಿದೆ. ಹಲವರು ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಸರ್ಕಾರ ನಿಯಂತ್ರಿಸಲಾಗದ ಪರಿಸ್ಥಿತಿಗೆ ಬಂದಿದೆ. ಹತ್ಯೆ ಮೂಲಕ ಹಿಂದೂಗಳ ಧ್ವನಿ ಅಡಗಿಸಬಹುದು, ಹಿಂದುತ್ವ ನಾಶ ಮಾಡಬಹುದು ಎಂದುಕೊಂಡಿದ್ದರೆ ಅವರ ಭ್ರಮೆ ಅದು ಸಾಧ್ಯವಿಲ್ಲ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಜ್ಯೋತಿ ತಿಪ್ಪೇಸ್ವಾಮಿ, ನಗರ ಅಧ್ಯಕ್ಷ ಧನುಷ್, ಮಾಜಿಅಧ್ಯಕ್ಷ ಟಿ.ಎಚ್.ಹನುಮಂತರಾಜು, ಒಬಿಸಿ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ವಕ್ತಾರ ಟಿ.ಆರ್.ಸದಾಶಿವಯ್ಯ, ಮುಖಂಡರಾದ ರುದ್ರೇಶ್, ಸತ್ಯಮಂಗಲ ಜಗದೀಶ್, ಶ್ರೀನಿವಾಸ್, ಪ್ರತಾಪ್, ಗಂಗಾಧರ್, ಹನುಮಂತರಾಜು, ವೆಂಕಟೇಶಾಚಾರ್ ರಾಜಣ್ಣ ಮೊದಲಾದವರು ಭಾಗವಹಿಸಿದ್ದರು.