ಸಮಸ್ತ ಆ್ಯಪ್ ಮೂಲಕವೇ ಕೆಲಸ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿರುವುದಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತೀವ್ರವಾದ ವಿರೋಧ

ಹೊಸಪೇಟೆ: ಮೂಲ ಸೌಲಭ್ಯ ಹಾಗೂ ಪ್ರೋತ್ಸಾಹಧನ ನೀಡದೆ ಸಮಸ್ತ ಆ್ಯಪ್‌ ಆಶಾಗಳಿಗೆ ಕಡ್ಡಾಯಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಮಸ್ತ ಆ್ಯಪ್ ಮೂಲಕವೇ ಕೆಲಸ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿರುವುದಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತೀವ್ರವಾದ ವಿರೋಧವಿದೆ. ಆ್ಯಪ್ ಬಳಕೆ ಕಡ್ಡಾಯಗೊಳಿಸಿದರೂ ಅಗತ್ಯ ಗುಣಮಟ್ಟದ ಮೊಬೈಲ್ ಅಥವಾ ಟ್ಯಾಬ್‌ ಆರೋಗ್ಯ ಇಲಾಖೆ ಒದಗಿಸಿಲ್ಲ. ವೈಯಕ್ತಿಕ ಉಪಯೋಗಕ್ಕೆ ಇರುವ ಸ್ವಂತ ಮೊಬೈಲ್ ಬಳಸುವಂತೆ ಆರೋಗ್ಯ ಇಲಾಖೆ ಒತ್ತಾಯಿಸುತ್ತಿದೆ. ಸರ್ಕಾರ ಆಶಾಗಳಿಂದ ಬಿಟ್ಟಿ ಕೆಲಸ ಮಾಡಿಸಲು ಹೊರಟಿದೆ. ಈ ಹಿಂದೆ ನೀಡುತ್ತಿದ್ದ ಮಾಸಿಕ 280 ಮೊಬೈಲ್ ಬಾಡಿಗೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಆರ್ಥಿಕ ಹೊರೆ ಹಾಗೂ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕುರಿತು ಆತಂಕ ಉಂಟಾಗಿದೆ ಎಂದರು.

ಜಿಲ್ಲಾ ಗೌರವ ಅಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ಮಧ್ಯ ವಯಸ್ಸಿನ ಅನೇಕ ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ಮತ್ತು ಡಿಜಿಟಲ್ ಆ್ಯಪ್ ಬಳಕೆ ಕಷ್ಟವೇ ಸರಿ. ಜತೆಗೆ ಆ್ಯಪ್‌ನಲ್ಲಿ ಡೇಟಾ ಸೇವ್ ಆಗದಿರುವುದು, ಸಿಂಕ್ರೊನೈಸೇಶನ್ ಸಮಸ್ಯೆ, ದಾಖಲೆ ಕಣ್ಮರೆಯಾಗುವುದು, ಡುಪ್ಲಿಕೇಟ್ ಎಂಟ್ರಿ ಹಾಗೂ ತಾಂತ್ರಿಕ ದೋಷಗಳಿಗೆ ತ್ವರಿತ ಪರಿಹಾರ ದೊರೆಯದಿರುವುದರಿಂದ ಪುನರಾವರ್ತಿತ ಕೆಲಸ ಮತ್ತು ಹೆಚ್ಚುವರಿ ಒತ್ತಡ ಉಂಟಾಗಿದೆ.

ಆಶಾ ಕಾರ್ಯಕರ್ತೆಯರಿಗೆ ಗುಣಮಟ್ಟದ ಮೊಬೈಲ್‌, ಟ್ಯಾಬ್‌ ಒದಗಿಸಬೇಕು, ಸಮಸ್ತ ಆ್ಯಪ್‌ನಲ್ಲಿ ಡೇಟಾ ನಮೂದಿಸುವ ಕೆಲಸಕ್ಕೆ ಸೂಕ್ತ ಪ್ರೋತ್ಸಾಹಧನ ನಿಗದಿಪಡಿಸಿ ನೀಡಬೇಕು, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಈ ಮೂಲ ಸೌಲಭ್ಯಗಳು ದೊರೆಯುವವರೆಗೆ ಸಮಸ್ತ ಆ್ಯಪ್ ಬಳಕೆ ಕಡ್ಡಾಯಗೊಳಿಸಬಾರದು ಎಂದು ಒತ್ತಾಯಿಸಿದರು.

ಮುಖಂಡರಾದ ವೀರಮ್ಮ, ಮಂಗಳ, ಸ್ಫೂರ್ತಿ, ನೇತ್ರಾ, ಮಹೇಶ್ವರಿ, ಚೆನ್ನಮ್ಮ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.