ಸಾರಾಂಶ
ಹೊಸಪೇಟೆ: ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಆ್ಯಂಬುಲೆನ್ಸ್ ಹಾಗೂ ಶಾಲಾ ವಾಹನಗಳಿಗೆ ಜಿಪಿಎಸ್ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ವಿಜಯನಗರ ಜಿಲ್ಲೆ ಸಾರಿಗೆ ಕಾರ್ಮಿಕರ ಸಂಘಗಳ ಒಕ್ಕೂಟದ ಜಂಟಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ನಗರಸಭೆ ಮುಂಭಾಗದಿಂದ ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತ, ನಂತರ ಎಪಿಎಂಸಿ ಮುಂಭಾಗದಿಂದ ನಗರದ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಗೆ ಆಗಮಿಸಿತು. ಅಲ್ಲಿ ಪ್ರತಿಭಟನೆ ನಡೆಸಲಾಯಿತು.ಕೇಂದ್ರ ಸರ್ಕಾರದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ರಾಜ್ಯ ಸರ್ಕಾರ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಆ್ಯಂಬುಲೆನ್ಸ್ ಹಾಗೂ ಶಾಲಾ ವಾಹನಗಳಿಗೆ ಜಿಪಿಎಸ್ ಕಡ್ಡಾಯ ಮಾಡಿದೆ. ಆದರೆ ಖಾಸಗಿ ಬಸ್, ಸರ್ಕಾರಿ ಸಾರಿಗೆ ಬಸ್, ರಾಷ್ಟ್ರೀಯ ಪರವಾನಗಿ ಹೊಂದಿರುವ ಲಾರಿಗಳು ಹಾಗೂ ಜಿ ಕೆಟಗರಿ ಸರ್ಕಾರಿ ವಾಹನಗಳಿಗೆ ವಿನಾಯಿತಿ ನೀಡಿ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಹ ರೀತಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕು ಎಂಬ ಕಾನೂನು ತರುವ ಸಂದರ್ಭದಲ್ಲಿ ಕೇವಲ ಟ್ಯಾಕ್ಸಿ , ಮ್ಯಾಕ್ಸಿಕ್ಯಾಬ್, ಆ್ಯಂಬುಲೆನ್ಸ್ ಹಾಗೂ ಶಾಲಾ ವಾಹನಗಳಿಗೆ ಮಾತ್ರ ಕಡ್ಡಾಯ ಮಾಡಿರುವುದನ್ನು ಕೈ ಬಿಡಬೇಕು. ಕೇಂದ್ರ ಸರ್ಕಾರವು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ದ್ವಿಚಕ್ರ ವಾಹನಗಳನ್ನು ಸಾರಿಗೆಯೇತರ ವಿಭಾಗದಿಂದ ಸಾರಿಗೆ ವಿಭಾಗಕ್ಕೆ ತರಲು ಹೊರಟಿರುವುದು ಕೂಡಲೇ ಕೈಬಿಡಬೇಕು ಹಾಗೂ ಶಾಲಾ ವಾಹನಗಳಿಗೆ ಶಾಲಾ ಆಡಳಿತ ಮಂಡಳಿಯಿಂದ ಸರ್ಟಿಫಿಕೆಟ್ ಪಡೆಯಬೇಕೆಂದು ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆ ತರಲು ಹೊರಟಿರುವುದು ಕೂಡಲೇ ಕೈಬಿಡಬೇಕು. ರಾಜ್ಯ ಸರ್ಕಾರದ ಅಡಿಯಲ್ಲಿ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಿದ್ದು ಕಲ್ಯಾಣ ಮಂಡಳಿಗೆ ಹಣ ಬಿಡುಗಡೆ ಮಾಡಿ ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವ ಬದಲಾಗಿ ಇಂತಹ ಅವೈಜ್ಞಾನಿಕ ಕಾನೂನುಗಳನ್ನು ಜಾರಿ ಮಾಡುತ್ತಾ ಸಾರಿಗೆ ವಾಹನದ ಮಾಲೀಕರ ಹತ್ತಿರ ಹಣ ಕೊಳ್ಳೆ ಹೊಡೆಯುವ ಕೆಲಸವನ್ನು ಮಾಡುತ್ತಿರುವುದು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಯಲ್ಲಿ ಮೈನಿಂಗ್ ಲಾರಿಗಳ ಚಾಲಕರು ಹಾಗೂ ಇತರ ಭಾರಿ ವಾಹನಗಳ ಚಾಲಕರು ಚಾಲನಾ ಪರವಾನಗಿ ಪತ್ರ ನವೀಕರಣದ ಸಂದರ್ಭದಲ್ಲಿ ದೂರದ ಕಲಬುರಗಿಗೆ ಹೋಗಿ, ಒಂದು ದಿನದ ತರಬೇತಿ ಪಡೆದು, ಸರ್ಟಿಫಿಕೇಟ್ ತಂದ ನಂತರ ವಾಹನ ಚಾಲನಾ ಪರವಾನಗಿ ನವೀಕರಣ ಮಾಡುತ್ತಿರುವ ಅವೈಜ್ಞಾನಿಕ ಕಾನೂನನ್ನು ಕೂಡಲೇ ಕೈಬಿಡಬೇಕು. ಅಂತಹ ತರಬೇತಿಗಳನ್ನು ಸ್ಥಳೀಯವಾಗಿ ಕಚೇರಿಯಲ್ಲಿ ಸ್ಮಾರ್ಟ್ ಕ್ಲಾಸ್ ನಡೆಸುವ ಮುಖಾಂತರ ಚಾಲಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಕಾರ್ಮಿಕರ ಒಕ್ಕೂಟದ ರಾಜ್ಯ ಸಹ ಸಂಚಾಲಕ ಕೆ.ಎಂ. ಸಂತೋಷ್ ಕುಮಾರ್, ವಿಜಯನಗರ ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ವೈ. ರಾಮಚಂದ್ರಬಾಬು, ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮಂಜು ನಾಯಕ್, ಸಿಐಟಿಯುನ ಟ್ಯಾಕ್ಸಿ ಚಾಲಕರ ಸಂಘದ ರಾಜ್ಯ ಮುಖಂಡ ಚನ್ನಬಸವನಗೌಡ ಹಾಗೂ ಸಿಐಟಿಯುನ ಆ್ಯಂಬುಲೆನ್ಸ್ ಘಟಕದ ಮುಖಂಡರಾದ ಜಮೀರ್, ಮಣಿಕಂಠ, ಹಂಪಿಯ ಸಿಐಟಿಯುನ ಆಟೋ ಸಂಘಟನೆಯ ಮುಖಂಡರಾದ ಗೀಜಪ್ಪ, ಅನಂತ, ವಿರೂಪಾಕ್ಷಿ, ಮುಖಂಡರಾದ ರಾಮಣ್ಣ, ಬಸವರಾಜ, ವೆಂಕಟೇಶ್ ಕುಲಕರ್ಣಿ, ಸಿಕಂದರ್ ಮತ್ತಿತರರಿದ್ದರು.