ಸಾರಾಂಶ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ವತಿಯಿಂದ ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ವತಿಯಿಂದ ನ.24ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಕರ್ನಾಟಕ ಸೇರಿದಂತೆ ದೇಶದ ಸಹಸ್ರಾರು ಶಿಕ್ಷಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕದ 2 ಲಕ್ಷ, ದೇಶದ 30 ಲಕ್ಷ ಶಿಕ್ಷಕರು ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯಬೇಕಾದರೇ 2 ವರ್ಷದಲ್ಲಿ ಕಡ್ಡಾಯವಾಗಿ ಟಿಇಟಿ ಪಾಸಾಗಬೇಕಿದೆ. ಕೇಂದ್ರ ಸರ್ಕಾರ ದೇಶದ 30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಈ ಸಮಸ್ಯೆಯ ಬಗ್ಗೆ ಗಮನಸೆಳೆಯಲು ಒಂದು ದಿನದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿ ಪೂರಕ ಮಾಹಿತಿ ಸಂಗ್ರಹಿಸುತ್ತಿದೆ. ಅದೇ ರೀತಿ ಶಿಕ್ಷಕರ ಫೆಡರೇಷನ್ ಕೂಡಾ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಲೋಕಸಭೆಯಲ್ಲಿ ಇದಕ್ಕಾಗಿ ವಿಶೇಷ ಕಾಯ್ದೆ ತಂದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸೇವಾ ರಕ್ಷಣೆ ನೀಡಿ, ಸುಪ್ರೀಂಕೋರ್ಟ್ ಆದೇಶ ಪೂರ್ವಾನ್ವಯಗೊಳಿಸದೇ, ಮುಂದಿನ ನೇಮಕಾತಿಗಳಲ್ಲಿ ಟಿಇಟಿ ಕಡ್ಡಾಯಗೊಳಿಸುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ 25 ರಿಂದ 30 ವರ್ಷ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಕೂಡಾ ಕಡ್ಡಾಯವಾಗಿ ಟಿಇಟಿ ಪಾಸ್ ಮಾಡಬೇಕೆಂಬುದು ತೀರ್ಪು ಮಾರಕವಾಗಿದೆ. ಟಿಇಟಿ ಎಂಬುದು ಶಿಕ್ಷಕರ ಅರ್ಹತಾ ಪರೀಕ್ಷೆಯಾಗಿದ್ದು, ಕರ್ನಾಟಕದಲ್ಲಿ 2014ರಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿದೆ. ಅದಕ್ಕೂ ಮೊದಲಿನ ಶಿಕ್ಷಕರು ಕೂಡಾ ಟಿಇಟಿ ಪಾಸಾಗಬೇಕಿದೆ. ಮೊದಲಿನ ಶಿಕ್ಷಕರು ಸಿಇಟಿ ಪರೀಕ್ಷೆಯನ್ನು ಪಾಸಾಗಿ ಶಿಕ್ಷಕರಾಗಿದ್ದಾರೆ. ಈಗ ಅವರು ಕೂಡಾ ಟಿಇಟಿ ಪಾಸಾಗಬೇಕಿದೆ. ಹೀಗಾಗಿ ಈ ಹೋರಾಟ ನಡೆಯಲಿದೆ ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.;Resize=(128,128))
;Resize=(128,128))