ಶಿಲುಬೆ ಬೆಟ್ಟ ಕ್ರೈಸ್ತರ ಪವಿತ್ರ ಸ್ಥಳವಾಗಿದ್ದು, ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳು ಸುತ್ತಮುತ್ತಲಿನ ಗ್ರಾಮಗಳ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿವೆ ಎಂದು ಆರೋಪಿಸಿದರು. ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಭಾರೀ ಸ್ಫೋಟಗಳಿಂದ ಪರಿಸರ ಹಾನಿ ಉಂಟಾಗುವುದಷ್ಟೇ ಅಲ್ಲದೆ, ಜನರ ಜೀವ, ಆಸ್ತಿಗೂ ಅಪಾಯ ಎದುರಾಗಿದೆ ಎಂದರು. ಹಾಸನ ನಗರದ ಬೀರನಹಳ್ಳಿ ಕೆರೆ ಪ್ರದೇಶದ ನಿವಾಸಿಗಳಿಗೆ ನಿವೇಶನ ಗುರುತಿಸಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನಆಲೂರು ತಾಲೂಕಿನ ಹೊಸಮಠ ಗ್ರಾಮದ ಸಮೀಪದ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ, ಬೇಲೂರು ತಾಲೂಕಿನ ಬಂಟೇನಹಳ್ಳಿ ವಾರ್ಡ್‌ ೨ರಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ಹಾಸನ ನಗರದ ಬೀರನಹಳ್ಳಿ ಕೆರೆ ಪ್ರದೇಶದ ನಿವಾಸಿಗಳಿಗೆ ನಿವೇಶನ ಗುರುತಿಸಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘದ ವತಿಯಿಂದ ಆರಂಭಿಸಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೂ ಮುಂದುವರಿದಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಈ ಹೋರಾಟದಲ್ಲಿ ಪ್ರತಿಭಟನಾಕಾರರು ಸ್ಥಳದಲ್ಲೇ ಸೌದೆ ಒಲೆ ಬಳಸಿಕೊಂಡು ಅಡುಗೆ ಮಾಡುತ್ತಾ ನಿರಂತರ ಧರಣಿ ನಡೆಸುತ್ತಿದ್ದಾರೆ. ಆದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕಿಲ್ಲವೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಬೇಸರ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಲುಬೆ ಬೆಟ್ಟ ಕ್ರೈಸ್ತರ ಪವಿತ್ರ ಸ್ಥಳವಾಗಿದ್ದು, ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳು ಸುತ್ತಮುತ್ತಲಿನ ಗ್ರಾಮಗಳ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿವೆ ಎಂದು ಆರೋಪಿಸಿದರು. ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಭಾರೀ ಸ್ಫೋಟಗಳಿಂದ ಪರಿಸರ ಹಾನಿ ಉಂಟಾಗುವುದಷ್ಟೇ ಅಲ್ಲದೆ, ಜನರ ಜೀವ, ಆಸ್ತಿಗೂ ಅಪಾಯ ಎದುರಾಗಿದೆ ಎಂದರು.

ಸ್ಫೋಟಗಳ ಪರಿಣಾಮವಾಗಿ ಹೊಸಮಠ ಸೇರಿದಂತೆ ಕಲ್ಲುಕೊಪ್ಪಲು, ಮಟದಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ, ಬಡಗಿಕೊಪ್ಪಲು, ದಿಣ್ಣೆಕೊಪ್ಪಲು ಗ್ರಾಮಗಳ ಅನೇಕ ಮನೆಗಳಲ್ಲಿ ಬಿರುಕುಗಳು ಉಂಟಾಗಿದ್ದು, ಕೆಲವು ಮನೆಗಳಲ್ಲಿ ವಾಸಿಸುವುದೇ ಅಪಾಯಕಾರಿಯಾಗಿದೆ ಎಂದು ದೂರಿದರು. ನಿತ್ಯವೂ ಸ್ಫೋಟದ ಭಾರೀ ಶಬ್ದದಿಂದ ಗ್ರಾಮಸ್ಥರು ಭಯಭೀತರಾಗಿದ್ದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿದ ಲಾರಿಗಳು ಹಾಗೂ ಭಾರೀ ಯಂತ್ರೋಪಕರಣಗಳ ಸಂಚಾರದಿಂದ ಗ್ರಾಮಾಂತರ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಅವರು ಹೇಳಿದರು.ಇನ್ನೊಂದೆಡೆ, ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. ೨ರ ದೇವರಾಜಪುರ ಅಂಬೇಡ್ಕರ್‌ ಬೀದಿಯಲ್ಲಿ ೧೯೫೦ರಿಂದಲೇ ಸುಮಾರು ೩೦೦ರಿಂದ ೪೦೦ ಕುಟುಂಬಗಳು ವಾಸಿಸುತ್ತಿದ್ದರೂ, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ ಹಾಸನ ನಗರದ ರಾಘವೇಂದ್ರ ಕಾಲೋನಿ ಬೀರನಹಳ್ಳಿ ಕೆರೆ ಪ್ರದೇಶದಲ್ಲಿ ೨೦೦೭ರ ಮೇ ೧೧ರಂದು ತೆರವುಗೊಳಿಸಲಾದ ಸುಮಾರು ೭೫ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಅರಸೀಕೆರೆ ರಸ್ತೆಯ ಬಿ. ಟಿ. ಕೊಪ್ಪಲು ಸಮೀಪ ಹಕ್ಕುಪತ್ರ ನೀಡಲಾಗಿದ್ದರೂ, ಇದುವರೆಗೆ ನಿವೇಶನ ಗುರುತಿಸಿ ಹಸ್ತಾಂತರಿಸದಿರುವುದರಿಂದ ಫಲಾನುಭವಿಗಳು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು. ಈ ಮೂರು ಪ್ರಮುಖ ಬೇಡಿಕೆಗಳನ್ನು ತಕ್ಷಣ ಎಚ್ಚರಿಕೆ ನೀಡಿದರು. ಧರಣಿಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಮಹಮ್ಮದ್ ಸಾದಿಕ್, ವೆಂಕಟೇಶ್, ಗಂಗಾಧರ್‌, ಸಮಿಉಲ್ಲ, ಅರುಣ ಭಾಸ್ಕರ್‌, ಪವಿತ್ರ, ರಂಗಮ್ಮ, ಕವಿತ ಸೇರಿದಂತೆ ಹಲವರು ಭಾಗವಹಿಸಿದ್ದರು.