ಇಂದು ನಲ್ಲೂರು ಗ್ರಾಪಂ ವಿರುದ್ಧ ಪ್ರತಿಭಟನೆ: ಅನಿಲ್‌

| Published : Dec 18 2024, 12:47 AM IST

ಸಾರಾಂಶ

ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ನಿವೇಶನಗಳಿಗೆ ಸಂಬಂಧಪಟ್ಟಂತೆ ಸೌಲಭ್ಯಗಳಿಲ್ಲದ ನೂತನ ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ಮತ್ತು ಕೆರೆ ಜಾಗ ಒತ್ತುವರಿ ತೆರವು ನಿರ್ಲಕ್ಷ್ಯ ಹಾಗೂ ಗ್ರಾಪಂನಲ್ಲಿ ಅವ್ಯವಹಾರಗಳ ಖಂಡಿಸಿ ಡಿ.18ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಅನಿಲ್ ಹೇಳಿದ್ದಾರೆ.

- ನೂತನ ಬಡಾವಣೆ ಅನುಮೋದನೆ, ನಿವೇಶನ ವಿಚಾರದಲ್ಲಿ ಅವ್ಯವಹಾರ: ಆರೋಪ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ನಿವೇಶನಗಳಿಗೆ ಸಂಬಂಧಪಟ್ಟಂತೆ ಸೌಲಭ್ಯಗಳಿಲ್ಲದ ನೂತನ ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ಮತ್ತು ಕೆರೆ ಜಾಗ ಒತ್ತುವರಿ ತೆರವು ನಿರ್ಲಕ್ಷ್ಯ ಹಾಗೂ ಗ್ರಾಪಂನಲ್ಲಿ ಅವ್ಯವಹಾರಗಳ ಖಂಡಿಸಿ ಡಿ.18ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಅನಿಲ್ ಹೇಳಿದರು. ಮಂಗಳವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಗಡಿ ಮಾರಮ್ಮದೇವಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದರು.

ಖಾಸಗಿ ಜಮೀನು ಹೊಂದಿದ್ದ ಮಲ್ಲೇಶಪ್ಪ ಎಂಬವರು ನೂತನವಾಗಿ ಬಡಾವಣೆ ಮಾಡುವಾಗ ಉದ್ಯಾನ ವನಕ್ಕೆಂದು ಮೀಸಲಿಟ್ಟಿದ್ದ 589 ಚದರ ಮೀಟರ್ ಜಾಗವನ್ನು ಬಿಟ್ಟಿದ್ದರು. ಆ ಜಾಗವನ್ನು ಪಂಚಾಯಿತಿಗೆ ಸೇರಿಸಿಕೊಳ್ಳದೇ, ಬಡಾವಣೆ ಮಾಡಿದ ಮಾಲೀಕರಿಗೇ ಬಿಟ್ಟು ಕೊಟ್ಟಿದ್ದಾರೆ. ಆ ನಿವೇಶನವನ್ನು ಇ-ಸ್ವತ್ತು ಮಾಡಿಸಿಕೊಂಡು ಬೇರೆಯವರಿಗೆ ಈಗಾಗಲೇ ಮಾರಾಟ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಳ್ಳುವಾಗ ಗ್ರಾಪಂ ಅಭಿವೃದ್ಧಿಗೆ ಸಿ.ಎ. ನಿವೇಶನಗಳನ್ನು ನಿಯಮಾವಳಿ ಪ್ರಕಾರ ಬಿಟ್ಟಿರುವ ನಿವೇಶನಗಳನ್ನು ಗ್ರಾಪಂನವರ ಹೆಸರಿಗೆ ಪಡೆಯಬೇಕು. ಆದರೆ, ಅಂತಹ ನಿವೇಶನಗಳನ್ನು ಭೂ ಮಾಲೀಕರೇ ಮಾರಾಟ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ ಸೇರಿದಂತೆ ಇವರ ಹಿಂದೆ ಇ.ಒ.ಗಳಾಗಿದಂತಹ ಎಲ್ಲರ ಗಮನಕ್ಕೆ ತರಲಾಗಿದೆ. ಆದರೂ, ಹಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರಿಸಿದರು. ನಲ್ಲೂರು ಗ್ರಾಮವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತಿದೆ. 20 ಸಾವಿರದಷ್ಟು ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ. ಗ್ರಾ.ಪಂ.ನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವ ಅರ್ಹತೆ ಪಡೆದುಕೊಂಡಿದೆ. ಸರ್ಕಾರಿ ಕಚೇರಿ ಕಟ್ಟಡಗಳ ನಿರ್ಮಾಣ ಮಾಡಲು ಜಾಗದ ಕೊರತೆಗಳಿವೆ ಎಂದು ಹೇಳಿ, ಕೆರೆಯ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್‌ಗಳನ್ನು ಕಟ್ಟಿಕೊಂಡವರಿಗೆ ಇ-ಸ್ವತ್ತು ನೀಡಿದ್ದಾರೆ. ಗ್ರಾಮದ ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಅವ್ಯವಹಾರಗಳು ನಡೆದು, ಗ್ರಾಮ ಪಂಚಾಯಿತಿ ಆಡಳಿತವೇ ದಿಕ್ಕೆಟ್ಟುಹೋಗಿದೆ ಎಂದು ಆರೋಪಿಸಿದರು.

ತಾಪಂ ಇಒ ಬಿ.ಕೆ.ಉತ್ತಮ ಅವರು ಗ್ರಾಮ ಪಂಚಾಯಿತಿ ಎಲ್ಲಿದೆ ಎಂದು ನೋಡಿಲ್ಲ. ಈ ಗ್ರಾಪಂನಲ್ಲಿ ಇಷ್ಟೆಲ್ಲಾ ಹಗರಣಗಳು ನಡೆಯುತ್ತಿದ್ದರೂ ಅಧಿಕಾರಿಗಳು ಗಮನಹರಿಸಿಲ್ಲ. ಗ್ರಾಮದ ಶ್ರೇಯೋಭಿವೃದ್ಧಿಗಾಗಿ ಹಲವು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಗ್ರಾಪಂ ಸದಸ್ಯ ಮಂಜುನಾಥ್, ರುದ್ರೇಶ್, ಮರಿಯಪ್ಪ, ಶಂಕರಪ್ಪ, ಬಸಣ್ಣ, ನಾಗಣ್ಣ, ರುದ್ರಮುನಿ, ರುದ್ರೇಶ್ ಇತರರಿದ್ದರು.

- - - -17ಕೆಸಿಎನ್‌ಜಿ1.ಜೆಪಿಜಿ:

ಪತ್ರಿಕಾಗೋಷ್ಠಿಯಲ್ಲಿ ನಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಅನಿಲ್ ಮಾತನಾಡಿದರು.