ಮಾನ್ವಿಯಲ್ಲಿ ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ಪ್ರತಿಭಟನೆ

| Published : Jun 27 2024, 01:05 AM IST

ಸಾರಾಂಶ

ಮಾನ್ವಿ ಪಟ್ಟಣದಲ್ಲಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನೀಟ್‌ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಮಾನ್ವಿ: ದೇಶದಲ್ಲಿ ನಡೆದಿರುವ ನೀಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸವವೃತ್ತದಲ್ಲಿ ಸೇರಿದ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿಗೆ ಮೆರವಣಿಗೆ ಜಾಥಾ ಮೂಲಕ ತೆರಳಿ ತಾಲೂಕು ಆಡಳಿತ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರವು ವೈದ್ಯಕೀಯ ಮತ್ತು ಇತರೆ ಉನ್ನತ ಶಿಕ್ಷಣ ಪ್ರವೇಶಾತಿಗಾಗಿ ನಡೆಸುವ ಕೇಂದ್ರಿಕೃತ ಪರೀಕ್ಷೆ ರದ್ದು ಪಡಿಸಿ ಆಯಾ ರಾಜ್ಯಗಳು ಪರೀಕ್ಷೆ ನಡೆಸಲು ಸ್ವಾಯತ್ತತೆ ನೀಡಬೇಕು. ನೀಟ್ ಪರೀಕ್ಷೆ ಅವ್ಯವಹಾರದಲ್ಲಿ ಭಾಗಿಯಾದ ಎಲ್ಲರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕು. ಎನ್‌ಟಿಎ ರದ್ದು ಪಡಿಸಬೇಕು. ರಾಜ್ಯದಲ್ಲಿ ನೀಟ್ ಪರೀಕ್ಷೆ ರದ್ದು ಪಡಿಸಬೇಕು ಹಾಗೂ ಮೊದಲಿನಂತೆ ಕೆ-ಸಿಇಟಿ ಪರೀಕ್ಷೆ ಜಾರರಿಗೆ ತರಬೇಕು ಹಾಗೂ ಪ್ರಕರಣದ ಹೊಣೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಮಲ್ಲೇಶ ಮಾಚನೂರು, ಮುಖಂಡರಾದ ಜಿಶಾನ್ ಆಖಿಲ್ ಸಿದ್ದಿಖಿ, ಯಲ್ಲಪ್ಪ ವಕೀಲರು, ಸುರೇಶ್ ಬೈಲ್ ಮರ್ಚೇಡ್, ಮೆಹಬೂಬ್ ಮದ್ಲಾಪುರ್, ಬಂಡೆಗುರು ಕರೆಗುಡ್ಡ, ಮೊಹಮ್ಮದ್ ಬೇಗ್ ಸೇರಿ, ವಿದ್ಯಾರ್ಥಿಗಳು ಇದ್ದರು.