ನೀಟ್ ಪರೀಕ್ಷೆ ಹಗರಣ ವಿರೋಧಿಸಿ ಪ್ರತಿಭಟನೆ

| Published : Jun 23 2024, 02:08 AM IST

ಸಾರಾಂಶ

ಕೋಚಿಂಗ್‌ ಸೆಂಟರ್‌ಗೆ ಸೇರಿದ ಮಕ್ಕಳು ಉತ್ತಮ ಅಂಕಗಳಿಸಬೇಕು ಎಂಬ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ಇದು ಲಕ್ಷಾಂತರ ಮಕ್ಕಳ ಆತ್ಮವಿಶ್ವಾಸ ಕುಸಿಯುವಂತೆ ಮಾಡಿದೆ. ಈ ವಿಚಾರದಲ್ಲಿ ಪ್ರಧಾನಿ ಮೌನ ಮುರಿಯಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನೀಟ್ ಪರೀಕ್ಷೆಯ ಫಲಿತಾಂಶ ಹಗರಣವನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಎನ್‌ಎಸ್‌ಯುಐನಿಂದ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದರು.

ಈ ವೇಳೆ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಬಹುದೊಡ್ಡ ಹಗರಣ. ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಮೋದಿ ಮೌನ ಮುರಿಯಲಿ

ವೈದ್ಯಕೀಯ ಕೋರ್ಸ್‌ ಸೇರುವ ಕನಸು ಕಂಡ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಕಷ್ಟಪಟ್ಟು ಅಭ್ಯಾಸ ನಡೆಸಿದ್ದರು. ಇದೀಗ ಪರೀಕ್ಷೆ ಅಕ್ರಮದಿಂದ ಅವರ ಬದುಕು ಅತಂತ್ರವಾಗಿದೆ. ಕೋಚಿಂಗ್‌ ಸೆಂಟರ್‌ಗೆ ಸೇರಿದ ಮಕ್ಕಳು ಉತ್ತಮ ಅಂಕಗಳಿಸಬೇಕು ಎಂಬ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ಇದು ಲಕ್ಷಾಂತರ ಮಕ್ಕಳ ಆತ್ಮವಿಶ್ವಾಸ ಕುಸಿಯುವಂತೆ ಮಾಡಿದೆ. ಈ ವಿಚಾರದಲ್ಲಿ ಪ್ರಧಾನಿ ಮೌನ ಮುರಿಯಬೇಕು. ‘ಪರೀಕ್ಷಾ ಪೇ ಚರ್ಚಾ’ ರೀತಿ, ನೀಟ್ ಅಕ್ರಮದ ಕುರಿತು ವಿದ್ಯಾರ್ಥಿಗಳ ಜತೆ ಚರ್ಚಿಸಬೇಕು. ಇಲ್ಲದಿದ್ದಲ್ಲಿ ನೀಟ್‌ ಅಕ್ರಮ ವಿರೋಧಿಸಿ ಎನ್ ಎಸ್ ಯುಐ ನಿಂದ ಪ್ರತಿಭಟಿಸಲಾಗುವುದು ಮತ್ತು ಇದನ್ನು ಆಂದೋಲನವಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

ವೈದ್ಯಕೀಯ ಸ್ನಾತಕೋತ್ತರ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಾದ ನೀಟ್, ಈ ವರ್ಷ ಮೇ 5ರಂದು ನಡೆದಿತ್ತು. ಜೂ. 14ರಂದು ಘೋಷಣೆಯಾಗಬೇಕಿದ್ದ ಫಲಿತಾಂಶ, ಜೂನ್ 4ರಂದೇ ಘೋಷಣೆಯಾಯಿತು. ಅಂದೇ ಲೋಕಸಭಾ ಚುನಾವಣಾ ಫಲಿತಾಂಶವೂ ಸಹಾ ಘೋಷಣೆ ಆಯಿತು. ನೀಟ್‌ನಲ್ಲಿ ತಮ್ಮ ಅಕ್ರಮ ಮುಚ್ಚಿಹಾಕಲು ಲೋಕಸಭಾ ಚುನಾವಣಾ ಫಲಿತಾಂಶದ ದಿನವೇ ಫಲಿತಾಂಶ ಪ್ರಕಟಿಸಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಲಿ

ನೀಟ್ ಫಲಿತಾಂಶ ಹೊರಬಿದ್ದಾಗ 67 ಮಂದಿಗೆ, ಪರೀಕ್ಷೆಗೆ ಪೂರ್ಣ ಅಂಕಗಳಾದ 720 ಅಂಕಗಳು ಲಭಿಸಿದ್ದು ಅನೇಕರಿಗೆ ಅಚ್ಚರಿಯುಂಟು ಮಾಡಿತ್ತು. ಅದಕ್ಕೆ ಕಾರಣ, ನೀಟ್ ಪ್ರವೇಶ ಪರೀಕ್ಷೆಯ ಮೌಲ್ಯ ಮಾಪನ ಮಾಡುವ ವೇಳೆ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕ (ಗ್ರೇಸ್ ಮಾರ್ಕ್ಸ್). 67 ಮಂದಿಗೆ ಶೇ100ರಷ್ಟು ಅಂಕಗಳು ಸಿಕ್ಕಿದವು. 2020-21, 2021-22, 2022-23 ರಲ್ಲಿ ಒಂದಿಬ್ಬರಿಗೆ ಮಾತ್ರ ಶೇ 100 ಅಂಕಗಳು ಬಂದಿದ್ದವು. ಸಾಮಾನ್ಯವಾಗಿ ನೀಟ್ ಪರೀಕ್ಷೆಯಲ್ಲಿ ಎಷ್ಟೇ ಬುದ್ಧಿವಂತರಾದರೂ ಶೇ. 100ರಷ್ಟು ಅಂಕಗಳು ಸಿಗುವುದು ಸಾಧ್ಯವಿಲ್ಲ. ಕೇವಲ ಕೃಪಾಂಕ ಮಾತ್ರದಿಂದಲೇ ಶೇ. 100ಕ್ಕೆ 100ರಷ್ಟು ಅಂಕ ಪಡೆಯುವಂಥ ಮಾದರಿ ಸರಿಯಾದ ಪರೀಕ್ಷಾ ಮಾದರಿಯಲ್ಲ. ಈ ನೀಟ್ ಪರಿಕ್ಷೆಯ ಫಲಿತಾಂಶದ ಹಗರಣದ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡ ಬೇಕು ಎಂದು ಆಗ್ರಹಿಸಿದರು.ಬೇಲಿಯೇ ಹೊಲ ಮೇಯ್ದಂತೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಯರಾಮ್ ಮಾತನಾಡಿ,‘ನೀಟ್ ಪರೀಕ್ಷೆಯ ಅಕ್ರಮ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇದರ ಹೊಣೆ ಹೊತ್ತು ಕೇಂದ್ರ ಸರ್ಕಾರ ಕೋಡಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಯುವ ಕಾಂಗ್ರೆಸ್ ನ ಎಸ್.ಎಂ.ಜಗದೀಶ್,ಜಿಲ್ಲಾ ಕಾರ್ಮಿಕ ಕಾಂಗ್ರೇಸ್ ಕಾರ್ಯದರ್ಶಿ ಮಂಜುನಾಥ್, ಎನ್ ಎಸ್ ಯು ಐ ಉಪಾಧ್ಯಕ್ಷ ಎನ್.ಶಿವಾನಂದ್, ಜನರಲ್ ಸೆಕ್ರೆಟರಿ ಶ್ರೀಕಾಂತ್, ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕಾಂಗ್ರೆಸ್ ಮುಖಂಡರು ಇದ್ದರು.