ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಮಂಗಳವಾರ ನಗರದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯಿರುವ ಕಾಂಗ್ರೆಸ್ ಭವನದಿಂದ ಪ್ರತಿಭಟನಾ ರ್‍ಯಾಲಿ ಆರಂಭಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಮಾರ್ಗದುದ್ದಕ್ಕೂ ಕೊಲೆಗಡುಕ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಘೋಷಣೆಗಳನ್ನು ಕೂಗಿದರು. ಅಲ್ಲದೇ ಆರೋಪಿ ಫಯಾಜ್‌ನ ಪ್ರತಿಕೃತಿಗೆ ನೇಣು ಹಾಕಿ ಕೈಯಲ್ಲಿ ಹಿಡಿದು ಗಲ್ಲು ಶಿಕ್ಷೆ ವಿಧಿಸುವಂತೆ ಅಣುಕು ಪ್ರದರ್ಶಿಸಿದರು. ವಿದ್ಯಾರ್ಥಿನಿ ನೇಹಾ ಹತ್ಯೆ ರಾಜ್ಯವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಇಂತಹ ಘಟನೆಗಳು ಮರುಕಳಿಸದಂತೆ, ಮಹಿಳೆಯರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಮಾತನಾಡಿ, ನೇಹಾ ಹತ್ಯೆಯಿಂದ ನೋವಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕಿದೆ. ಇದರಲ್ಲಿ ಯಾರೂ ರಾಜಕೀಯ ಮಾಡೋಕೆ ಬಯಸೋದಿಲ್ಲ. ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಸಿಗಲಿ, ಅಪರಾಧಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.ಶಾಸಕ ಆಸೀಫ್ (ರಾಜು) ಸೇಠ ಮಾತನಾಡಿ, ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ನಡೆಯಬಾರದಿತ್ತು. ಆರೋಪಿ ಫಯಾಜ್ ಕಠಿಣ ಶಿಕ್ಷೆಯಾಗಲಿ. ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಸಿ ಸರ್ಕಾರ ಮನವಿ ಸಲ್ಲಿಸಲಾಗಿದೆ. ಸರ್ಕಾರ ಸೂಕ್ತಕ್ರಮ ಕೈಗೊಳ್ಳಲಿದೆ. ಆ ಮೂಲಕ, ಸಂತ್ರಸ್ತ ಹಿಂದು ಕುಟುಂಬದ ಪರವಾಗಿ ನಾವಿದ್ದೇವೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ಪ್ರದೀಪ ಎಂ.ಜೆ, ವಿನಯ ನಾವಲಗಟ್ಟಿ, ಪ್ರಭಾವತಿ, ಜಯಶ್ರೀ ಮಾಳಗಿ, ಆರ್.ಪಿ.ಪಾಟೀಲ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.