ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ: ಕೊಲೆಗಾರನಿಗೆ ಗಲ್ಲು ಶಿಕ್ಷೆ ನೀಡಿ

| Published : Apr 21 2024, 02:16 AM IST

ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ: ಕೊಲೆಗಾರನಿಗೆ ಗಲ್ಲು ಶಿಕ್ಷೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಳಿಯಾಳದಲ್ಲಿ ಶನಿವಾರ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹಳಿಯಾಳ: ಹುಬ್ಬಳ್ಳಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಾಗೂ ಕೊಲೆಗಾರ ಫಯಾಜನಿಗೆ ಗಲ್ಲುಶಿಕ್ಷೆ ಅಥವಾ ಎನ್‌ಕೌಂಟರ್ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಶನಿವಾರ ಸಂಜೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪಟ್ಟಣದ ಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ ಪ್ರತಿಭಟನಾಕಾರರು ನೇಹಾ ಕೊಲೆಗಾರನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಘೋಷಣೆಗಳನ್ನು ಕೂಗುತ್ತ, ಶಿವಾಜಿ ವೃತ್ತದಲ್ಲಿ ಬಂದು ಸೇರಿ, ರಾಜ್ಯ ಹೆದ್ದಾರಿಯ ಮೇಲೆ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಸಭೆ ನಡೆಸಿದರು.

ಪ್ರತಿಭಟನಾ ಸಭೆ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವದೇವ ದೇಸಾಯಸ್ವಾಮಿ, ಕಾಂಗ್ರೆಸ್ ಮುಖಂಡ ಸತ್ಯಜಿತ ಗಿರಿ, ಬಿಜೆಪಿಯ ಯುವಮುಖಂಡ ಶ್ರೀನಿವಾಸ ಘೋಟ್ನೇಕರ, ಜೆಡಿಎಸ್ ಮುಖಂಡ ಸುಭಾನಿ ಹುಬ್ಬಳ್ಳಿ, ಸೋಮೇಶ ಹುಂಡೇಕರ, ಗಣಪತಿ ದೇವರಮನಿ ಮೊದಲಾದವರು ಮಾತನಾಡಿದರು. ನೇಹಾ ಹಿರೇಮಠ ಅಂತಹ ಪ್ರಕರಣ ಯಾವುದೇ ಸಮಾಜದ ಹೆಣ್ಣುಮಕ್ಕಳ ಮೇಲೆ ಮತ್ತೆ ಮರುಕಳಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು. ಇಂತಹ ಪ್ರಕರಣದಲ್ಲಿ ಭಾಗಿಯಾದವರಿಗೆ ಗಲ್ಲುಶಿಕ್ಷೆ ಅಥವಾ ಎನ್ಕೌಂಟರ್‌ ಶಿಕ್ಷೆ ವಿಧಿಸುವಂತಹ ಆಡಳಿತ ವ್ಯವಸ್ಥೆ ಜಾರಿಯಾಗಬೇಕು. ಕೊಲೆಗಾರ ಫಯಾಜ್ ಪರ ವಕಾಲತ್ತನ್ನು ಯಾವ ವಕೀಲರೂ ವಹಿಸಬಾರದು. ಪಾಲಕರು ತಮ್ಮ ಮಕ್ಕಳ ಮೇಲೆ ಆದಷ್ಟು ನಿಗಾ ವಹಿಸಬೇಕು, ಮಕ್ಕಳ ಬಗ್ಗೆ ಕಾಳಜಿ, ಅವರ ಚಲನವಲನ ಮೇಲೆ ಕಣ್ಣಿಡಬೇಕು ಎಂದು ಮನವಿ ಮಾಡಿದರು.

ಸಭೆಯ ಆನಂತರ ತಾಲೂಕು ಆಡಳಿತ ಸೌಧಕ್ಕೆ ಮತ್ತೆ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-೨ ತಹಸೀಲ್ದಾರ್‌ ಜಿ.ಕೆ. ರತ್ನಾಕರ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯ ಮುಂದಾಳತ್ವವನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಉದಯ ಹೂಲಿ ವಹಿಸಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಬಿಜೆಪಿ ಪ್ರಮುಖರಾದ ಅನಿಲ ಮುತ್ನಾಳೆ, ವಿ.ಎಂ. ಪಾಟೀಲ, ಗಣಪತಿ ಕರಂಜೇಕರ, ವಾಸುದೇವ ಪೂಜಾರಿ, ಮಂಜುನಾಥ ಪಂಡಿತ, ಸಂತೋಷ ಘಟಕಾಂಬ್ಳೆ, ವಿರೂಪಾಕ್ಷ ಮೇಲಿನಮನಿ, ಶಾಂತಾ ಹಿರೇಕರ, ಶಾರದಾ ಹೂಲಿ, ಸುಧಾ ದೇಸಾಯಸ್ವಾಮಿ, ಮಧು ಮದನಳ್ಳಿಮಠ, ಪುಷ್ಪಾ ದೇಸಾಯಸ್ವಾಮಿ, ಯಶವಂತ ಪಟ್ಟೇಕರ, ವಿಜಯ ಬೊಬಾಟೆ ಮತ್ತು ಇತರರು ಇದ್ದರು. ಪ್ರತಿಭಟನೆಯನ್ನು ಬೆಂಬಲಿಸಿ ಬಿಜೆಪಿ, ಹಿಂದುಪರ ಸಂಘಟನೆಗಳು, ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು.