ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗುವ ದುಷ್ಪರಿಣಾಮಗಳ ವಿರುದ್ಧ ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗದ ಸಂಯುಕ್ತಾಶ್ರಯದಲ್ಲಿ ಮಾ.24ರಂದು ಬೆಳಗ್ಗೆ 9.30ರಿಂದ ಮಾ.25ರಂದು ಬೆಳಗ್ಗೆ 9.30ರವರೆಗೆ ನಗರದ ನೆಹರೂ ಮೈದಾನದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಯಲ್ಲಿ 16,000ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಪ್ರಸ್ತಾಪವಿದೆ. ಅಮೂಲ್ಯ ವನ್ಯಜೀವಿಗಳ ಆವಾಸ ಸ್ಥಾನವಾಗಿರುವ ಈ ಪ್ರದೇಶಕ್ಕೆ ಧಕ್ಕೆ ಬರುತ್ತಿದೆ. ಭೂಕುಸಿತ, ಜಲಮಾಲಿನ್ಯ, ನದಿ ಕಣಿವೆಗಳಲ್ಲಿ ಹೂಳು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಅಳಿವಿನಂಚಿನಲ್ಲಿರುವ ಸಿಂಹಬಾಲದ ಸಿಂಘಳಿಕ, ಕಾಳಿಂಗ ಸರ್ಪ, ಮಂಗಟ್ಟೆ ಹಕ್ಕಿ ಹಾಗೂ ಅಪರೂಪದ ಔಷಧಿ ಸಸ್ಯಗಳ ತಾಣವಾಗಿರುವ ಪಶ್ಚಿಮಘಟ್ಟ ಪ್ರದೇಶದ ಈ ಪ್ರದೇಶದಲ್ಲಿ ವನ್ಯಜೀವಿ ಕಾಯ್ದೆ 1972ರ ಸ್ಪಷ್ಟ ಉಲ್ಲಂಘನೆ ಈ ಯೋಜನೆಯಿಂದ ಆಗುತ್ತಿದೆ ಎಂದರು.
ಸುಮಾರು 18 ಸಾವಿರ ಟನ್ ಸ್ಫೋಟಕಗಳನ್ನು ಬಳಸಿ ಭೂಗತ ಬಂಡೆಗಳನ್ನು ಒಡೆದು ಸುರಂಗ ಮಾರ್ಗವನ್ನು ಕೊರೆಯಲಾಗುತ್ತದೆ. ಸುಮಾರು 1800 ಅಡಿ ಆಳದವರೆಗೆ ಭೂಮಿಯನ್ನು ಕೊರೆಯಲಾಗುತ್ತದೆ. ಇದರಿಂದ ಈ ಪ್ರದೇಶದಲ್ಲಿ ಭೂಕಂಪನವಾಗುವ ಆತಂಕವಿದೆ ಎಂದರು.ಸಾಧು-ಸಂತರು, ವಿವಿಧ ಪರಿಸರ ಸಂಘಟನೆಗಳು, 65 ಸಾವಿರಕ್ಕೂ ಹೆಚ್ಚು ನಾಗರಿಕರು ಈ ಯೋಜನೆ ಬೇಡ ಎಂದು ಬರೆದು ಕೊಟ್ಟಿದ್ದಾರೆ ಈ ಯೋಜನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನ್ಯಾಯಾಲಯಕ್ಕೂ ಮನವರಿಕೆಯಾಗಿದೆ ಎಂದ ಅವರು, ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೆಪಿಸಿಎಲ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಯೋಜನೆಯ 10 ಸಾವಿರ ಕೋಟಿ ರು.ಗಳನ್ನು ಲೂಟಿ ಮಾಡಲು ಅವರು ಪಣತೊಟ್ಟಂತಿದೆ. ಅಹೋರಾತ್ರಿ ಧರಣಿಗೆ ಸುಮಾರು 500 ಜನ ಆಗಮಿಸಲಿದ್ದು, ಇದಕ್ಕೆ ಬರುವ ಸಂಘಟನೆಗಳು ತಮ್ಮ ತಮ್ಮ ಬ್ಯಾನರ್‌ಗಳನ್ನು ತರಬಹುದು ಎಂದು ಹೇಳಿದರು.
ಡಾ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಕೆಲ ಪರಿಸರ ಹೋರಾಟಗಾರರು ಯೋಜನೆಯ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದು, ಜೂನ್ 10ರೊಳಗೆ ಉತ್ತರಿಸುವಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿಮಾಡಿದೆ. ನ್ಯಾಯಾಲಯದ ಸೂಚನೆ ಬರುವವರೆಗೆ ಯಾವುದೇ ಕಾಮಗಾರಿಯನ್ನು ಈ ಶರಾವತಿ ಕಣಿವೆಯಲ್ಲಿ ಹಮ್ಮಿಕೊಳ್ಳಬಾರದು ಎಂದು ತಾಕೀತು ಮಾಡಿದೆ. ಅಹೋರಾತ್ರಿ ಧರಣಿ ಸಂದರ್ಭದಲ್ಲಿ ಯೋಜನೆ ವಿರುದ್ಧ ಸಹಿ ಸಂಗ್ರಹಣೆಯೂ ನಡೆಯಲಿದೆ ಎಂದರು.
ಪರಿಸರ ತಜ್ಞ ಡಾ.ಎಲ್.ಕೆ.ಶ್ರೀಪತಿ ಮಾತನಾಡಿ, ಈಗ ಯೋಜನೆಗೆ ಮೊದಲ ಹಂತದಲ್ಲಿ 10,500 ಕೋಟಿ ರು. ವೆಚ್ಚದ ಅಂದಾಜು ಮಾಡಲಾಗಿದೆ. ಮುಂದೆ ಇದು ಪೂರ್ಣವಾಗುವ ಹೊತ್ತಿಗೆ 20 ಸಾವಿರ ಕೋಟಿ ರು.ಗೆ ತಲುಪಬಹುದು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಈ ಸಾಲಿನ ಬಜೆಟ್‌ನಲ್ಲಿ 3 ಸಾವಿರ ಮೆಗಾವ್ಯಾಟ್ ಉತ್ಪಾದನೆಗೆ 3500 ಕೋಟಿ ರು. ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಟ್ಟು ಬಜೆಟ್‌ನಲ್ಲಿ ಮಂಡಿಸಿದ ಯೋಜನೆಗಳನ್ನೇ ಮುಂದುವರೆಸಬಹುದು. ಕೆಪಿಸಿಎಲ್ ಪರಿಸರ ಸಂಘಟನೆಗಳಿಗೆ ಸ್ಪಂದಿಸುತ್ತಿಲ್ಲ. ಯಾವುದೇ ತಾಂತ್ರಿಕ ಆಡಳಿತಾತ್ಮಕ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಕೆ.ಈ. ಕಾಂತೇಶ್, ಎಸ್.ಬಿ. ಅಶೋಕ್ ಗಾಂಧಿಬಸಪ್ಪ, ನವ್ಯಶ್ರೀ ನಾಗೇಶ್, ಮಹಾದೇವ ಸ್ವಾಮಿ, ಶ್ರೀಕಾಂತ್, ಸುಬ್ಬಣ್ಣ, ಪರಿಸರ ರಮೇಶ್, ಜನಾರ್ಧನ್ ಪೈ ಮೊದಲಾದವರಿದ್ದರು.