ಬಳ್ಳಾರಿ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

| Published : Jan 18 2025, 12:48 AM IST

ಸಾರಾಂಶ

ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದಲ್ಲಿ ಐದು ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ದುರುಳನಿಗೆ ಗಲ್ಲು ಶಿಕ್ಷೆ ವಿಧಿಸಬೇಕು.

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದಲ್ಲಿ ಐದು ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ದುರುಳನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅತ್ಯಂತ ತುರ್ತಾಗಿ ಈ ಪ್ರಕರಣದ ವಿಚಾರಣೆ ಮುಗಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ವಿಜಯನಗರ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ್‌ ಒತ್ತಾಯಿಸಿದರು.

ಹೊಸಪೇಟೆ ನಗರದ ಡಾ. ಪುನೀತ್ ರಾಜಕುಮಾರ್ ಸರ್ಕಲ್‌ನಲ್ಲಿ ಹಮ್ಮಿಕೊಂಡಿದ್ದ ಹೋರಾಟವನ್ನುದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಹೆಣ್ಣುಮಕ್ಕಳು ಭಯಭೀತಿಯಿಂದ ಬದುಕುವಂತಾಗಿದೆ. ಇಂಥದ್ದೊಂದು ನರಕ ಸ್ಥಾಪನೆಯಾಗಲು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸೃಷ್ಟಿಸಿದ ದುರಾಡಳಿತ ಮತ್ತು ಭ್ರಷ್ಟಾಚಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ವಿಜಯನಗರ ಜಿಲ್ಲಾ ಸಾಮಾಜಿಕ ಜಾಲತಾಣದ ಮುಖ್ಯಸ್ಥ ವೀರೇಂದ್ರ ಮಾತನಾಡಿ, ಮಹಿಳೆಯರ ಮೇಲೆ ಇಂಥ ಪೈಶಾಚಿಕ ಕೃತ್ಯಗಳು ಪದೇಪದೇ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸಿಲ್‌ ಕಚೇರಿಯ ಶಿರಸ್ತೇದಾರ ಅಮರನಾಥ ಅವರಿಗೆ ನೀಡಲಾಯಿತು. ಪಕ್ಷದ ವಿಜಯನಗರ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಟಿ. ನಜೀರ್, ಪಕ್ಷದ ಮುಖಂಡರಾದ ಚಲವಾದಿ ಆನಂದ್, ವರುಣ್ ತೋರಣಗಟ್ಟೆ, ಬಿ. ವೆಂಕಟರಮಣ, ಮಂಜುನಾಥ ಜೈಸಿಂಗ್‌ಪುರ, ಜೆ. ಪಾಂಡುರಂಗ, ಮಂಜುನಾಥ ಗೌಳಿ, ಶರಣಪ್ಪ, ಗಣೇಶ ಸಾರಂಗಿ, ಪಿ. ಅಂಜಿನಿ, ಕೆ. ಕೃಷ್ಣ, ಅಭಿ ಮತ್ತಿತರರಿದ್ದರು.

ಹೊಸಪೇಟೆಯಲ್ಲಿ ಕೆಆರ್‌ಎಸ್‌ ಪಕ್ಷದ ವತಿಯಿಂದ ತಹಸಿಲ್‌ ಕಚೇರಿಯ ಶಿರಸ್ತೇದಾರ ಅಮರನಾಥ ಅವರಿಗೆ ಮನವಿ ಪತ್ರ ನೀಡಲಾಯಿತು.