ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ಬಸ್ ನಿಲ್ದಾಣದ ಮುಂದಿನ ನವಲಿ ವೃತ್ತದಲ್ಲಿ ಜಮಾಯಿಸಿದ ನೂರಾರು ಬೇಡಿಕೆ ಈಡೇರಿಸಲೇಬೇಕು ಎಂದು ಒತ್ತಾಯಿಸಿ ತಮಟೆ ಬಾರಿಸುವ ಮೂಲಕ ಹೋರಾಟ ಪ್ರಾರಂಭಿಸಿದರು. ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಹಳೇ ಬಸ್ ನಿಲ್ದಾಣದ ಮೂಲಕ ಸಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ಅಲ್ಲಿ ಸಾಂಕೇತಿಕವಾಗಿ ಸಭೆ ಸೇರಿ ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನ್ಯಾ. ಸದಾಶಿವ ಆಯೋಗವು ವಾಸ್ತವಿಕ ಸಮೀಕ್ಷೆ ನಡೆಸದೆ ಅವೈಜ್ಞಾನಿಕ ಮತ್ತು ಅವಾಸ್ತವಿಕ ವರದಿ ನೀಡಿದ್ದು, ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಭೋವಿ ಸಮಾಜದ ಮುಖಂಡ ಹನುಮಂತಪ್ಪ ಹಂಚಿನಾಳಕ್ಯಾಂಪ್ ಮಾತನಾಡಿ, ಸದಾಶಿವ ಆಯೋಗದ ವರದಿ ಇಲ್ಲಿಯವರೆಗೂ ಎಲ್ಲೂ ಬಹಿರಂಗವಾಗಿಲ್ಲ. ಮೊದಲು ವರದಿ ಬಹಿರಂಗವಾಗಿ ಚರ್ಚೆಯಾಗಲಿ. ನಂತರ ಒಳ ಮೀಸಲಾತಿ ಜಾರಿಗೆ ತನ್ನಿ. ಎರಡು ಜಾತಿಗಳಿಗೆ ನೀವು ನ್ಯಾಯ ಕೊಡಲು ಹೋಗಿ ಇನ್ನುಳಿದ 101 ಜಾತಿಗಳಿಗೆ ಘೋರ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಯ 101 ಸಮುದಾಯಗಳ ಪೈಕಿ 51 ಜಾತಿಗಳು ಗುರುತಿಸಿದ ಅಲೆಮಾರಿ ಮತ್ತು ವಿಮುಕ್ತ ಸಮದಾಯಗಳಾಗಿದ್ದು, ಇವುಗಳ ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿ ಪ್ರಾತಿನಿಧ್ಯದ ಕುರಿತಾದ ಸಮರ್ಥನೀಯ ದತ್ತಾಂಶಗಳನ್ನು (ಎಂಪೆರಿಕಲ್ ಡೇಟಾ) ಕ್ರೋಡಿಕರಿಸಬೇಕು. ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಾಮಾಜಿಕ, ಶೈಕ್ಷಣಿಕ ಮತ್ತು ಕಾನೂನು ತಜ್ಞರ ಸಮಿತಿ ರಚಿಸಿ, ಆ ಮೂಲಕ ವರದಿ ಪಡೆದು 101 ಜಾತಿಗಳ ಅಹವಾಲುಗಳನ್ನು ಮುಕ್ತವಾಗಿ ಆಲಿಸಿ. ಈ ಸಮುದಾಯಗಳ ಸಂಘ ಸಂಸ್ಥೆಗಳ, ಮುಖಂಡರು ಹಾಗೂ ಚಿಂತಕರೊಂದಿಗೆ ಸಮಾಲೋಚನೆ ನಡೆಸಿ. ನಂತರ ಪರಿಶಿಷ್ಟ ಜಾತಿ ಒಳಮೀಸಲಾತಿಯ (ವರ್ಗೀಕರಣ) ಜಾರಿಗೆ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಪಿ. ಲಕ್ಷ್ಮಣ ನಾಯ್ಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ದೀಪಾ ರಾಥೋಡ್ ಮಾತನಾಡಿದರು.
ಹೋರಾಟದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟದ ತಾಲೂಕು ಅಧ್ಯಕ್ಷ ರಮೇಶ ಮುಕ್ಕುಂದ, ಕುಮಾರ್ ರಾಥೋಡ್, ರಾಘವೇಂದ್ರ ಸಿದ್ದಾಪುರ, ಸುರೇಶ ರಾಥೋಡ್, ನಾಗರಾಜ ಭಜೆಂತ್ರಿ, ರಮೇಶ ರಾಥೋಡ್, ಮಲ್ಲಪ್ಪ ಭಜೇಂತ್ರಿ, ಶಾಂತ ಪವಾರ್, ಶಂಕರ ದೇವಿಕ್ಯಾಂಪ್, ರಮೇಶ ಭೋವಿ ನಾಗನಕಲ್, ಪಂಪಾಪತಿ ಭೋವಿ, ಲಕ್ಷ್ಮಣ ಭೋವಿ, ವೀರೇಶ ನಾಗನಕಲ್, ಹನುಮಂತಪ್ಪ ಬರಗೋರು, ಭೀಮಣ್ಣ ಭೋವಿ ಸೇರಿದಂತೆ ಇತರರು ಇದ್ದರು.