ಸಾರಾಂಶ
ಗದಗ: ಫೆ. 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸ್ಲಂ ಜನರ ಮೇಲಿನ ಸಾಮಾಜಿಕ ಮತ್ತು ಅಭಿವೃದ್ಧಿ ತಾರತಮ್ಯ ವಿರೋಧಿಸಿ ಹಾಗೂ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ಸಂವಿಧಾನ ವಿರೋಧಿ ವಸತಿ ಇಲಾಖೆ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಲಂ ಜನಾಂದೋಲನ ಸಂಘಟನೆಯ ಜಿಲ್ಲಾಧ್ಯಕ್ಷ ಇನ್ತಿಯಾಜ್ ಮಾನ್ವಿ ಹೇಳಿದರು.
ಅವರು ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 2025-26ನೇ ಸಾಲಿನ ಬಜೆಟ್‌ನಲ್ಲಿ ಸ್ಲಂ ಜನರ ಜನಸಂಖ್ಯೆಗೆ ಅನುಗುಣವಾಗಿ ಪಾಲು ನೀಡಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿರುವ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಲು ಒತ್ತಾಯಿಸಿ ಹಾಗೂ ಸ್ಲಂ ಜನರಿಗೆ ಪ್ರತ್ಯೇಕ ಸಚಿವಾಲಯ ಮತ್ತು ನಗರ ಉದ್ಯೋಗ ಖಾತ್ರಿ ಯೋಜನೆ ಘೋಷಣೆ ಸೇರಿದಂತೆ ನಿವೇಶನ ರಹಿತರಿಗೆ ವಸತಿ ಕಲ್ಪಿಸುವ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಬಜೆಟ್‌ನಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಹಣ ಮೀಸಲಿಡಬೇಕು. ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆದು ಭೂಸ್ವಾಧೀನಕ್ಕೆ ಸರ್ಕಾರ ಹಣ ನೀಡಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು. ಸ್ಲಂ ಜನರ ಜೀವನೋಪಾಯಕ್ಕಾಗಿ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಬೇಕು. ನಗರ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆ ಫಲಾನುಭವಿ ಶುಲ್ಕವನ್ನು ಎಸ್‌ಸಿ/ಎಸ್‌ಟಿಗಳಿಗೆ 25 ಸಾವಿರ ಪಾವತಿಸಲು ಅವಕಾಶ ಕಲ್ಪಿಸಬೇಕು. ಬೆಂಗಳೂರು ಸ್ಲಂ ನಿವಾಸಿಗಳ ಪುನರ್‌ವಸತಿಗಾಗಿ ಭೂ ಮಂಜೂರಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಮುಲ್ಲಾ, ಮೌಲಾಸಾಬ್ ಗಚ್ಚಿ, ಪರ್ವಿನಾಬಾನು ಹವಾಲ್ದಾರ, ಅಶೋಕ ಕುಸಬಿ, ಅಕ್ಬರಬಾಷ ಡಂಬಳ, ಖಾಜಾಸಾಬ್ ಇಸ್ಮಾಯಿಲನವರ, ಮಂಜುನಾಥ ಸಿರಿಗೇರಿ, ರೇಷ್ಮಾ ಡಾಲಾಯತ್, ಮೆಹಬೂಬಸಾಬ್ ಬಳ್ಳಾರಿ ಉಪಸ್ಥಿತರಿದ್ದರು.