- ಹರಿಹರದಲ್ಲಿ ಟೈರ್, ಎಸ್‌ಎಸ್‌ಎಂ ಪ್ರತಿಕೃತಿ ದಹಿಸಿ ಆಕ್ರೋಶ । ಬೆಂಕಿ ನಂದಿಸಿದ ಪೊಲೀಸರು- - - ಕನ್ನಡಪ್ರಭ ವಾರ್ತೆ ಹರಿಹರ
ಶಾಸಕ ಬಿ.ಪಿ.ಹರೀಶ್ ಘನತೆ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹಗುರವಾಗಿ ಮಾತನಾಡಿರುವ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ, ಶನಿವಾರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿ ಎಸ್‌ಎಸ್‌ಎಂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಶಿವಮೊಗ್ಗ ರಸ್ತೆಯ ತಾಲೂಕು ಬಿಜೆಪಿ ಕಾರ್ಯಾಲಯದಿಂದ ಹರಪನಹಳ್ಳಿ ಸರ್ಕಲ್‌ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ ಮಾತನಾಡಿ, ಕೆಲವು ದಿನಗಳ ಹಿಂದೆ ನೂತನ ಪಶು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರಿಗೆ ಕ್ಷೇತ್ರದ ಅನ್ನದಾತರು ತಮ್ಮ ಗದ್ದೆಗಳಿಗೆ ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಅನ್ನದಾತರು ಶಾಸಕ ಬಿ.ಪಿ. ಹರೀಶ್ ಅವರಿಗೆ ಗೌರವದಿಂದ ಅಣ್ಣಾ ಅಂದಿದ್ದಾರೆ. ಅದಕ್ಕೆ ಸೌಜನ್ಯದಿಂದ ಉತ್ತರಿಸುವ ಬದಲು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು, ಹೆಂಡ ಕುಡಿದ ಕೋತಿಯಂತೆ ವರ್ತಿಸುತ್ತ ಶಾಸಕ ಬಿ.ಪಿ. ಹರೀಶ್ ಕುರಿತು ಅಸಾಂವಿಧಾನಿಕ ಪದಗಳನ್ನು ಬಳಸಿ, ಶಾಸಕರು, ಅನ್ನದಾತರು, ಮತದಾರರನ್ನು ಅವಮಾನಿಸಿದ್ದಾರೆ ಎಂದರು.ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರನ್ನು ಸಂಸದೆ ಆಗುವಲ್ಲಿ ಹರಿಹರ ಕ್ಷೇತ್ರದ ಜನತೆ ಮತಗಳನ್ನು ಹಾಕಿದ್ದಾರೆ. ಜಿಲ್ಲೆಯ ಹಿರಿಯ ರಾಜಕಾರಣಿ ಮುತ್ಸದ್ದಿ ದಿ. ಡಾ. ಶಾಮನೂರು ಶಿವಶಂಕರಪ್ಪನವರು ಎಂದಿಗೂ, ಯಾರನ್ನು ಅವಮಾನಿಸಿದವರಲ್ಲ. ಮೂರು ನಾಲ್ಕು ದಿನದೊಳಗೆ ಸಚಿವ ಮಲ್ಲಿಕಾರ್ಜುನ ಕ್ಷಮೆಯಾಚಿಸದಿದ್ದರೆ, ಸಚಿವ ಸ್ಥಾನದ ರಾಜೀನಾಮೆಗಾಗಿ ಒತ್ತಾಯಿಸಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮೆಳ್ಳಿಕಟ್ಟಿ ನಾಗರಾಜ್, ಮುಖಂಡರಾದ ಯಶವಂತ ರಾವ್ ಜಾಧವ್, ಮಾಜಿ ದೂಡ ಅಧ್ಯಕ್ಷರಾದ ದೇವರಮನೆ ಶಿವಕುಮಾರ್, ಅಣಬೇರು ಜೀವನ ಮೂರ್ತಿ, ನಗರ ಅಧ್ಯಕ್ಷ ರಾಜು ರೋಖಡೆ, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ ಎಂ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು. ಐರಣಿ ಅಣ್ಣೇಶ್, ಹರಿಹರ ನಗರ ಪ್ರಧಾನ ಕಾರ್ಯದರ್ಶಿಗಳು ಸಂತೋಷ ಗುಡಿಮನಿ, ಗಿರೀಶ ಕೆ.ಬಿ.ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ ಹೊನ್ಮಾಳಿ. ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ಕೃಷ್ಣ. ಮುಖಂಡರಾದ ರಾಕೇಶ ಜಾಧವ್ ಮಾತನಾಡಿದರು.
ರವಿ ರಾಯ್ಕರ್, ಅದ್ವೈತ, ರೂಪಾ ಕಾಟ್ವೆ. ಸಾಕ್ಷಿ ಶಿಂಘೆ, ರಶ್ಮಿ ಮೆಹರ್ವಾಡೆ, ಜಿಲ್ಲಾ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಸುಧಾ. ಅಂಬುಜಾ, ಆಶಾ. ಶರತ್, ಫೋಟೋ ಸಂತೋಷ, ಸ್ವಾತಿ ಹನುಮಂತ.ವಿರೇಶ ಆದಾಪೂರ,ರವಿ ತಾವರಗಿ, ಆರ್.ಎಲ್.ಯೋಗೇಶ್, ಕೇಶವ.ಪ್ರಭಾಕರ್, ಮುಖಂಡರು, ಕಾರ್ಯಕರ್ತರು ಇದ್ದರು.
ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಲು ಮುಂದಾದರು. ಪೊಲೀಸರು ನೀರಿನಿಂದ ಬೆಂಕಿ ನಂದಿಸಿದರು. ಈ ಮಧ್ಯೆ ಕೆಲ ಕಾರ್ಯಕರ್ತರು ಎಸ್‌ಎಸ್‌ಎಂ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದರು. ಆಗ ಪೊಲೀಸರು ಬೆಂಕಿ ನಂದಿಸಿದರು. ಈ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.- - -
-12ಎಚ್.ಆರ್.ಆರ್1: ಹರಿಹರದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿದರು.