ಸಾರಾಂಶ
ರಾಜ್ಯದಲ್ಲಿ ಹಾಲಿನ, ವಿದ್ಯುತ್, ಸಾರಿಗೆ ಸೇರಿದಂತೆ ಮತ್ತಿತರ ವಸ್ತುಗಳ ಮೇಲಿನ ರಾಜ್ಯ ಸರ್ಕಾರದ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದಲ್ಲಿ ಹಾಲಿನ, ವಿದ್ಯುತ್, ಸಾರಿಗೆ ಸೇರಿದಂತೆ ಮತ್ತಿತರ ವಸ್ತುಗಳ ಮೇಲಿನ ರಾಜ್ಯ ಸರ್ಕಾರದ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗೆ ಹಣ ಜೋಡಿಸಲು ದರ ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ದರ ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆ ಹಾಕಲಾಗುತ್ತಿದೆ. ರಾಜ್ಯದಲ್ಲಿನ ಬಡವರು ಹಾಗೂ ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ ಎಂದು ಆರೋಪಿಸಿದರು.
ರಾಜ್ಯ ಆರ್ಥಿಕವಾಗಿ ದಿವಾಳಿ ಹಂತಕ್ಕೆ ಹೋಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರಿ ಗುತ್ತಿಗೆಯಲ್ಲ ಮೀಸಲಾತಿ ನೀಡಲಾಗಿದೆ. ಇದು ಸಂವಿಧಾನ ಬಾಹಿರವಾಗಿದೆ. ಹಾಲಿನ, ವಿದ್ಯುತ್, ಸಾರಿಗೆ, ಸ್ಟಾಂಪ್, ಮದ್ಯದ ದರ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಅಲ್ಲದೇ, ಹೊಸ ಹೊಸ ತೆರಿಗೆಗಳನ್ನು ಹಾಕಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಎಲ್ಲ ದರಗಳನ್ನು ಕೂಡಲೇ ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅಲ್ಪಸಂಖ್ಯಾತರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಿರುವುದು ಕಾನೂನು ಬಾಹಿರ, ಸಂವಿಧಾನ ವಿರೋಧಿಯಾಗಿದೆ. ಸರ್ಕಾರದ ಈ ಕ್ರಮ ಖಂಡನೀಯ. ಉನ್ನತ ವ್ಯಾಸಂಗಕ್ಕೆ ವಿದೇಶಗಳಿಗೆ ತೆರಳುವ ಮುಸ್ಲಿಮ ಮಕ್ಕಳಿಗೆ ₹20 ಲಕ್ಷ ಬದಲು ₹30 ಲಕ್ಷ ನೀಡುವುದಾಗಿ ಹೇಳಿದೆ. ಅಲ್ಲದೇ, ಮುಸ್ಲಿಮ ಹೆಣ್ಣುಮಕ್ಕಳ ಆತ್ಮರಕ್ಷಣಾ ಕಲೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ ಎಂದು ಆರೋಪಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮುರಘೇಂದ್ರಗೌಡ ಪಾಟೀಲ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.