ಬೀದಿ ವ್ಯಾಪಾರಿಗಳ ಅಂಗಡಿ ಎತ್ತಂಗಡಿಗೆ ಹುನ್ನಾರ ಖಂಡಿಸಿ ಪ್ರತಿಭಟನೆ

| Published : Feb 06 2025, 11:46 PM IST

ಸಾರಾಂಶ

ನಗರದ ಪ್ರಮುಖ ಬೀದಿಗಳಲ್ಲಿರುವ ಬೀದಿ ವ್ಯಾಪಾರಿಗಳನ್ನು ಗುಂಡಮ್ಮ ಕ್ಯಾಂಪ್ ನೂತನ ಮರುಕಟ್ಟೆಗೆ ಸ್ಥಳಾಂತರ ಮಾಡುವ ಹುನ್ನಾರ ನಡೆದಿರುವುದನ್ನು ಖಂಡಿಸಿ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದ ಪ್ರಮುಖ ಬೀದಿಗಳಲ್ಲಿರುವ ಬೀದಿ ವ್ಯಾಪಾರಿಗಳನ್ನು ಗುಂಡಮ್ಮ ಕ್ಯಾಂಪ್ ನೂತನ ಮರುಕಟ್ಟೆಗೆ ಸ್ಥಳಾಂತರ ಮಾಡುವ ಹುನ್ನಾರ ನಡೆದಿರುವುದನ್ನು ಖಂಡಿಸಿ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಇದಕ್ಕಿಂತ ಪೂರ್ವದಲ್ಲಿ ಬೀದಿ ವ್ಯಾಪಾರಿಗಳು ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ನಗರಸಭೆಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಗಡಿಗಳನ್ನು ಎತ್ತಂಗಡಿ ಮಾಡುತ್ತಿರುವುದರ ವಿರುದ್ಧ ಘೋಷಣೆ ಕೂಗಿದರು.

ನಂತರ ನಗರಸಭೆಯ ವ್ಯವಸ್ಥಾಪಕ ಷಣ್ಮುಖಪ್ಪಗೆ ಮನವಿ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಸೈಯದ್ ಬುರಾನುದ್ದೀನ್, ಹಲವಾರು ವರ್ಷಗಳಿಂದ ಬೀದಿ ವ್ಯಾಪಾರಿಗಳು ಸಣ್ಣ ಪುಟ್ಟ ಅಂಗಡಿಗಳನ್ನು ಬೀದಿಯಲ್ಲಿಟ್ಟುಕೊಂಡು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈಗ ನಗರಸಭೆಯವರು ಏಕಾಏಕಿಯಾಗಿ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆಗೆ ಸ್ಥಳಾಂತರ ಮಾಡುವ ಬಗ್ಗೆ ಮುನ್ಸೂಚನೆ ನೀಡಿದ್ದು, ಇದರಿಂದ ವ್ಯಾಪಾರಿಗಳ ಜೀವನದ ಮೇಲೆ ಬಂಡೆ ಹಾಕಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಿದರೆ ವ್ಯಾಪಾರ ನಡೆಯುವುದು ಕಷ್ಟವಾಗುವುದಲ್ಲದೆ ನಗರದ ಜನತೆಗೂ ತೊಂದರೆಯಾಗುತ್ತದೆ. ಅಲ್ಲದೆ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆಯ ಸ್ಥಳದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ವ್ಯಾಪರಸ್ಥರು ಪರದಾಡಬೇಕಾಗುತ್ತದೆ ಎಂದು ದೂರಿದರು.

ಹಲವಾರು ವರ್ಷಗಳಿಂದ ಗುಂಡಮ್ಮ ಕ್ಯಾಂಪ್ ಬಳಿ ಮಾರುಕಟ್ಟೆ ಸಿದ್ಧವಾಗಿದ್ದರೂ ಸಹ ವ್ಯಾಪಾರಸ್ಥರು ಈ ಸ್ಥಳಕ್ಕೆ ಯಾರು ಹೋಗುತ್ತಿಲ್ಲ. ಇಲ್ಲಿ ವ್ಯಾಪಾರ ಆಗದೆ ಇರುವುದರಿಂದ ಬೀದಿ ವ್ಯಾಪಾರಿಗಳಿಗೆ ಕಷ್ಟವಾಗುತ್ತದೆ. ಕಾರಣ ಇದ್ದ ಸ್ಥಳದಲ್ಲಿ ವ್ಯಾಪಾರ ಮುಂದುವರಿಸ ಬೇಕೆಂದು ಆಗ್ರಹಿಸಿದರು. ಈ ಸಂದರ್ಭ ವಿಜಯ್, ಹನುಮಂತಪ್ಪ ಹುಲಿಹೈದರ್ ಸೇರಿದಂತೆ ವ್ಯಾಪಾರಿಗಳು ಭಾಗವಹಿಸಿದ್ದರು.