ಕಬ್ಬು ಬೆಳೆಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ದರ ನಿಗದಿಗೊಳಿಸುವ ಭರವಸೆ ನೀಡಿ ರಾಜ್ಯ ರೈತ ಸಂಘದ ನಾಯಕರು ಹಾಗೂ ಕೆಲ ಕಬ್ಬು ಬೆಳೆಗಾರರನ್ನು ದೆಹಲಿಗೆ ಕರೆಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ಯಾವೊಬ್ಬ ಕೇಂದ್ರ ನಾಯಕರನ್ನೇ ಆಗಲಿ ಅಥವಾ ಕೃಷಿ ಸಚಿವರನ್ನೇ ಭೇಟಿ ಮಾಡಿಸಿ ಚರ್ಚೆಗೆ ಅವಕಾಶ ಕೊಡದೆ ವಂಚಿಸಿ ಕಳುಹಿಸಿ ಅವಮಾನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಬ್ಬು ಬೆಳೆಗೆ ದರ ನಿಗದಿ, ಬರಗಾಲದಲ್ಲಿ ಅದ್ಧೂರಿ ದಸರಾ ಆಚರಣೆ ಖಂಡಿಸಿ ಹಾಗೂ ಭಾರತ ಚುನಾವಣಾ ಆಯೋಗದ ಅಧ್ಯಕ್ಷ ಜ್ಞಾನೇಂದ್ರ ವಿರುದ್ಧ ಜೆನ್-ಜೀಗಳು ನಡೆಸುತ್ತಿರುವ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಸೇರಿ ಕೆಲಕಾಲ ರಸ್ತೆ ತಡೆದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿ ವೈಜ್ಞಾನಿಕ ದರ ನಿಗದಿಗೆ ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕಬ್ಬು ಬೆಳೆಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ದರ ನಿಗದಿಗೊಳಿಸುವ ಭರವಸೆ ನೀಡಿ ರಾಜ್ಯ ರೈತ ಸಂಘದ ನಾಯಕರು ಹಾಗೂ ಕೆಲ ಕಬ್ಬು ಬೆಳೆಗಾರರನ್ನು ದೆಹಲಿಗೆ ಕರೆಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ಯಾವೊಬ್ಬ ಕೇಂದ್ರ ನಾಯಕರನ್ನೇ ಆಗಲಿ ಅಥವಾ ಕೃಷಿ ಸಚಿವರನ್ನೇ ಭೇಟಿ ಮಾಡಿಸಿ ಚರ್ಚೆಗೆ ಅವಕಾಶ ಕೊಡದೆ ವಂಚಿಸಿ ಕಳುಹಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ದರಗಳು ಗಗನಕ್ಕೆ ಏರುತ್ತಿದ್ದು, ಕಾರ್ಖಾನೆಗಳಲ್ಲಿ ತಯಾರಿಸಿದ ವಸ್ತುಗಳಿಗೆ ಮಾಲೀಕನೇ ದರ ನಿಗದಿಪಡಿಸುವ ಕಾಲದಲ್ಲಿ ರೈತರು ಮಾತ್ರ ಇನ್ನೂ ಅನ್ಯಾಯಕ್ಕೆ ತುತ್ತಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಕಬ್ಬು ಬೆಳೆಗೆ ವೈಜ್ಞಾನಿಕ ದರ ನಿಗದಿಪಡಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಂಚನೆ ಮಾಡುತ್ತಿದೆ. ಪ್ರತಿ ಟನ್ ಕಬ್ಬಿಗೆ 5 ಸಾವಿರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಳೆ ಕೊರತೆ ಬರಗಾಲ ಆವರಿಸಿ ರೈತರು ಬೆಳೆ ನಷ್ಟದಿಂದ ನಲುಗಿದ್ದಾರೆ. ಬೆಳೆ ಪರಿಹಾರ ಘೋಷಿಸಿ ನೂರೆಂಟು ಷರತ್ತು ವಿಧಿಸಿರುವ ರಾಜ್ಯ ಸರ್ಕಾರ ಕೋಟಿ ಕೋಟಿ ಸುರಿದು ಅದ್ಧೂರಿ ದಸರಾ ಆಚರಣೆ ಮಾಡಿ ಸಾವಿನ ಮನೆಯಲ್ಲಿ ಸಂಭ್ರಮಿಸುತ್ತಿರುವುದು ನಾಚಿಕೆ ಗೇಡು ಹಾಗೂ ರಾಜ್ಯದ ಬೊಕ್ಕಸ ಲಪಾಟಾಯಿಸುವ ತಂತ್ರಕ್ಕೆ ದಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ಅಧ್ಯಕ್ಷ ಶಂಭೂಗೌಡ ಮಾತನಾಡಿ, ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಭಾರತದ ಜೆನ್-ಜೀಗಳು ನಡೆಸುತ್ತಿರುವ ಹೋರಾಟ ಹಾಗೂ ಪ್ರಶ್ನಿಸುತ್ತಿರುವ ನೀತಿ ಸರಿಯಾಗಿದೆ. ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ಜ್ಞಾನೇಶ್ ಕುಮಾರ್ ಅವರ ನಡೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ರೈತಮುಖಂಡ ಕ್ಯಾತನಹಳ್ಳಿ ಗೋವಿಂದೇಗೌಡ, ರೈತ ಹೋರಾಟಗಾರರಾದ ಅರಳಕುಪ್ಪೆ ರೂಪ, ಕಡತನಾಳು ಬಾಲಕೃಷ್ಣ, ಮರಳಗಾಲ ಕೃಷ್ಣೇಗೌಡ, ಪಾಂಡು, ಕೂಡಲಕುಪ್ಪೆ ನಾಗೇಂದ್ರ, ಶ್ರೀಕಂಠಯ್ಯ, ದೊಡ್ಡಪಾಳ್ಯ ಜಯರಾಮು, ಬಿ.ಎಸ್.ರಮೇಶ್, ಎಂ.ಶೆಟ್ಟಹಳ್ಳಿ ಪುರುಷೋತ್ತಮ್, ನಾಗರಾಜು, ರಾಂಪುರ ರಾಮಚಂದ್ರು, ಫಿಲಿಪ್ಸ್, ದಸಂಸ ಮುಖಂಡರಾದ ಗಂಜಾಂ ಹೊನ್ನಪ್ಪ, ಮುಂಡುಗದೊರೆ ಮೋಹನ್, ರುಕ್ಮಾಂಗದ ಇತರರು ಭಾಗಿಯಾಗಿದ್ದರು.