ಸಾರಾಂಶ
ಜಿಲ್ಲೆಯ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ. 15 ತಾಲೂಕು, 18 ವಿಧಾನಸಭಾ ಕ್ಷೇತ್ರ ಹೊಂದಿರುವ ವಿಶಾಲ ಜಿಲ್ಲೆಯಾಗಿದೆ. ಬೆಳಗಾವಿ ಮಹಾನಗರ ಹಾಗೂ ಹಲವಾರು ತಾಲೂಕುಗಳ ನೂರಾರು ಗ್ರಾಮಗಳಿಗೆ ಹಿಡಕಲ್ ಜಲಾಶಯದಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಜಲಾಶಯ ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ಮುಖ್ಯ ಜಲದ ಮೂಲವಾಗಿದೆ. ಪ್ರತಿವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಿಡಕಲ್ ಜಲಾಶಯ ಖಾಲಿಯಾಗಿ ಜಿಲ್ಲೆಯಲ್ಲಿ ನೀರಿನ ಅಭಾವದಿಂದಾಗಿ ಜಿಲ್ಲೆಯ ಜನ ಹಾಗೂ ಮಹಾನಗರದ ಜನತೆ ನೀರಿನ ಸಮಸ್ಯೆ ಎದುರಿಸುತ್ತಾರೆ.
ಹಿಡಕಲ್ ಜಲಾಶಯದಿಂದ ಬೇಸಿಗೆಯಲ್ಲಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಂದ ಕೃಷಿ ಜಮೀನುಗಳಿಗೆ ನೀರು ಹರಿಸಲಾಗುತ್ತಿದ್ದು, ಹಿಡಕಲ್ ಜಲಾಶಯ ಜಿಲ್ಲೆಯ ಜೀವನಾಡಿಯಾಗಿದೆ. ಬೆಳಗಾವಿಯ ನವೀಲು ತೀರ್ಥ ಜಲಾಶಯದಿಂದ ಈಗಾಗಲೇ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ನೀರು ಪೂರೈಸಲಾಗುತ್ತಿದೆ. ಇದಕ್ಕೆ ಜಿಲ್ಲೆಯ ಜನ ಎಂದಿಗೂ ವಿರೋಧ ಮಾಡಿಲ್ಲ. ಆದರೆ,ಸರ್ಕಾರ ಈಗ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಮಂಡಳಿಯಿಂದ ಹಿಡಕಲ್ ಜಲಾಶಯದಿಂದ ಯಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 0.5 ಟಿಎಂಸಿ ನೀರು ಪೂರೈಸುವ ಕಾಮಗಾರಿ ಆರಂಭಿಸಿದ್ದು, ಸರ್ಕಾರ ಕೂಡಲೇ ಈ ಯೋಜನೆ ರದ್ದು ಮಾಡಿ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಈ ವಿಚಾರ ಬೆಳಗಾವಿ ಜಿಲ್ಲೆಯ ಮಹತ್ವದ ವಿಚಾರವಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಜಿಲ್ಲೆಯ ಎಲ್ಲ ಸಂಘಟನೆಗಳು ಮತ್ತು ರೈತರು ಸೇರಿಕೊಂಡು ಕಾಮಗಾರಿ ತಡೆಯಬೇಕಾಗುತ್ತದೆ. ಸರ್ಕಾರ ಬೆಳಗಾವಿ ಜಿಲ್ಲೆಯ ಬಂಡಾಯ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.