ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಉಕ್ಕು ಮತ್ತು ಬೃಹತ್ ಕೈಗಾರಿಕೆ ಕೆಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಲೋಕಾಯುಕ್ತ ವಿಶೇಷ ತನಿಖಾ ದಳ ಮುಖ್ಯಸ್ಥ ಚಂದ್ರಶೇಖರ್ ಅವರನ್ನು ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಗುರುವಾರ ಮನವಿ ಸಲ್ಲಿಸಿರುವ ಕಾರ್ಯಕರ್ತರು, ಭಾರತೀಯ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಐಪಿಎಸ್ ಕೇಡರ್ ಗೆ ಸೇರಿದ್ದು, ರಾಜಕೀಯ ಪ್ರಭಾವವನ್ನು ಬೆಳೆಸಿಕೊಂಡು ಪತ್ನಿಯ ಅನಾರೋಗ್ಯದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ರಾಜ್ಯಕ್ಕೆ ವರ್ಗಾವಣೆಗೊಂಡು ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಇವರು ಬೆಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಾ ಭೂಗಳ್ಳರಿಗೆ, ಸಮಾಜಘಾತಕ ಶಕ್ತಿಗಳೊಂದಿಗೆ ಕೈಜೋಡಿಸಿಕೊಂಡು ನೂರಾರು ಪ್ರಕರಣಗಳನ್ನು ತನಿಖೆ ಮಾಡದೆ ಮುಚ್ಚಿ ಹಾಕಿದ್ದಾರೆ. ಸಾಮಾನ್ಯ ಜನರನ್ನು ಮತ್ತು ಉದ್ಯಮಿಗಳನ್ನು ಹೆದರಿಸಿ ಬೆದರಿಸಿ ನೂರಾರು ಕೋಟಿ ಹಣ ಮಾಡಿದ್ದಾರೆ ಎಂದು ದೂರಿದರು.ವಿಜಯ ಟಾಟಾ ಅವರ ಮೇಲೆ 500 ಪ್ರಕರಣಗಳು ದಾಖಲಾಗಿದ್ದರೂ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಅನೇಕ ಪ್ರಕರಣಗಳಲ್ಲಿ ಡಿವೈಎಸ್ ಪಿ, ಪಿಎಸ್ಐ ಸೇರಿದಂತೆ ಸಣ್ಣ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಭ್ರಷ್ಟಚಾರ ನಡೆಸಿರುವ ಇವರು, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅವಾಚ್ಯ ಶಬ್ದ ಪದ ಬಳಕೆ ಮಾಡಿ ದರ್ಪ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರ ಸ್ವಾಮಿಯವರು, ಲೋಕಾಯುಕ್ತದಲ್ಲಿ ಕೆಲವರು ಭ್ರಷ್ಟಚಾರ ನಡೆಸುತ್ತಿದ್ದಾರೆ. ಆದ್ದರಿಂದ ತನಿಖೆ ಮಾಡುವಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದಕ್ಕೆ ಚಂದ್ರಶೇಖರ್, ಹಂದಿಗಳ ಜತೆಗೆ ಹೋಗಬೇಡಿ ನೀವು ಕೊಳಕಾಗುತ್ತಿರಿ ಎಂದು ಧಿಮಾಕಿನ ಮಾತುಗಳನ್ನಾಡಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.ಈ ವೇಳೆ ಜೆಡಿಎಸ್ ಪರಾಜಿತ ಅಭ್ಯರ್ಥಿ ವೀರಭದ್ರಪ್ಪ, ತಾಲೂಕು ಅಧ್ಯಕ್ಷ ಕರಿಬಸಪ್ಪ, ಒಬಿಸಿ ಅಧ್ಯಕ್ಷ ಎಸ್. ತಿಪ್ಪೇಸ್ವಾಮಿ, ಕಾರ್ಯಕರ್ತರಾದ ಪಾಲಣ್ಣ, ಚನ್ನಬಸಪ್ಪ, ಮಹೇಶ್ ,ಅಬ್ಬೇನಹಳ್ಳಿ ಪಾಲಯ್ಯ, ಮಹಾಂತೇಶ, ಸುರೇಶ ಇದ್ದರು.