ವಸತಿ ನಿಲಯದಲ್ಲಿ ಕುವೆಂಪು ಸಾಲುಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

| Published : Feb 20 2024, 01:52 AM IST

ಸಾರಾಂಶ

ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕುವೆಂಪು ಅವರ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ಎಲ್ಲ ಶಾಲೆಗಳಲ್ಲೂ ನಾಣ್ಣುಡಿಯಾಗಿ ಬರೆಯಲಾಗಿರುತ್ತದೆ. ಅಂತಹ ಮಹಾನ್ ಕವಿ ಕುವೆಂಪು ಅವರ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಘೋಷವಾಕ್ಯವನ್ನು ಬದಲಾಯಿಸಿ, ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆಯಿಸುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಗಾಂಧಿ ವೃತ್ತದಲ್ಲಿ ನಡೆದ ಎಬಿವಿಪಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಮಾತನಾಡಿ, ಕರ್ನಾಟಕದ ಎಲ್ಲ ಶಾಲೆಗಳಲ್ಲೂ ಕುವೆಂಪು ಅವರ ಪ್ರೇರಣೆಯ ಸಾಲುಗಳನ್ನು ಫಲಕದಲ್ಲಿ ಅಳವಡಿಸಲಾಗಿರುತ್ತದೆ. ಆದರೆ, ಈಗಿರುವ ಸರ್ಕಾರ ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದಿಷ್ಟು ಕಾರಣಕ್ಕೆ ಬೇರೆ ಬೇರೆ ಬದಲಾವಣೆಗಳನ್ನು ಮಾಡುವ ಮೂಲಕ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಇದೀಗ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕುವೆಂಪು ಸಾಲುಗಳನ್ನು ತಿರುಚಿ ಬರೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಸರಸ್ವತಿ, ಗಣಪತಿ ಈ ರೀತಿಯ ಧಾರ್ಮಿಕ ಪೂಜೆಗಳನ್ನು ಮಾಡುವುದನ್ನು ನಿಷೇಧ ಮಾಡಿ ಗೊಂದಲವನ್ನು ಸೃಷ್ಟಿ ಮಾಡಿತ್ತು ಎಂದು ದೂರಿದರು.

ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಮಲ್ಲಿಕಾರ್ಜುನ ಮಾಳಿ ಮಾತನಾಡಿ, ಈ ರೀತಿಯ ಘಟನೆಗಳಿಂದ ಬಹು ಸಂಖ್ಯಾತ ವಿದ್ಯಾರ್ಥಿ ಸಮುದಾಯ ಪ್ರೇರಣಾದಾಯಕವಾಗಿರುವ ಸರಸ್ವತಿ ದೇವಿ ಹಾಗೂ ಕರ್ನಾಟಕ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ವಾಕ್ಯಗಳನ್ನು ತಿರುಚಿ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಯಾವ ಸಂದೇಶವನ್ನ ಕೊಡಲು ಹೊರಟಿದೆ ಎಂಬುವುದು ರಾಜ್ಯದ ವಿದ್ಯಾರ್ಥಿ ಸಮುದಾಯದ ಪ್ರಶ್ನೆಯಾಗಿದೆ. ಈ ರೀತಿಯ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಿದ್ಧಾಂತದ ರಾಜಕಾರಣವನ್ನು ಸೇರ್ಪಡೆ ಮಾಡಲು ಹೊರಟಿರುವ ಸರ್ಕಾರದ ನಡೆ ಖಂಡನೀಯ. ಶಿಕ್ಷಣ, ದೇಶ, ರಾಷ್ಟ್ರೀಯತೆ, ಭಾರತೀಯ ಸಂಸ್ಕಾರ, ಭಾರತೀಯ ರಾಷ್ಟ್ರ ಪುರುಷರ, ಈ ವಿಚಾರದಡಿಯಲ್ಲಿ ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಹೊರಟಿರುವುದು ಶೋಷನೀಯ ಸಂಗತಿ ಎಂದರು.

ಪ್ರತಿಭಟನೆಯಲ್ಲಿ ಸಿದ್ದು ಪತ್ತಾರ್, ರೇಖಾ ಮಾಳಿ, ಪೂಜಾ ವೀರಶೆಟ್ಟಿ, ಶ್ರವಣ ಕಾತ್ರಾಳ, ಅಭಿಷೇಕ್ ಬಿರಾದಾರ, ಅಮಿತ್ ಬಣಗಾರ, ಶಿವನಗೌಡ ಬಿರಾದಾರ, ರೇವಣಸಿದ್ಧ ನಾವಿ ಇತರರು ಇದ್ದರು.