ಸಾರಾಂಶ
ಕನಕಪುರ: ಇಸ್ಕಾನ್ ಮುಖ್ಯಸ್ಥ ಚಿನ್ಮಯಿ ಕೃಷ್ಣದಾಸ್ ಪ್ರಭು ಅವರನ್ನು ದೇಶದ್ರೋಹದ ಆಪಾದನೆ ಮೇಲೆ ಬಂಧಿಸಿ ಕಾರಾಗೃಹದಲ್ಲಿ ಇಟ್ಟಿರುವ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೆ.ಆರ್.ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳು ಬಾಂಗ್ಲಾದೇಶದ ವಿರುದ್ಧ ಪ್ರತಿಭಟನೆ ನಡೆಸಿ ಗ್ರೇಡ್- 2 ತಹಸೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಬಳಿಕ ಮಾತನಾಡಿದ ಸುರೇಶ್ ಅವರು, ಬಾಂಗ್ಲಾ ದೇಶದದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ವಿಶ್ವದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಬಾಂಗ್ಲಾ ದೇಶದಲ್ಲಿ ಜಾತಿ, ಧರ್ಮ ನೋಡದೆ ಎಲ್ಲಾ ಬಡವರಿಗೂ ಆಶ್ರಯ ನೀಡುವುದರ ಜೊತೆಗೆ ನಿತ್ಯ ಅನ್ನದಾಸೋಹ ಮಾಡುತ್ತಿರುವ ಚಿನ್ಮಯಿ ಕೃಷ್ಣದಾಸ್ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ನಿರಪರಾಧಿ ಚಿನ್ಮಯಿ ಕೃಷ್ಣದಾಸ್ ಪ್ರಭು ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಿ ದೌರ್ಜನ್ಯ ಎಸಗುತ್ತಿರುವ ಮತಾಂಧರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.ಬಜರಂಗದಳ ಜಿಲ್ಲಾ ಸಂಯೋಜಕ್ ಕೋಟೆ ಕಿರಣ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೆ.ಪಿ.ಕುಮಾರ್ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ, ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದಲ್ಲಿ ಬಾಂಗ್ಲಾ ದೇಶದ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಯಿತು.