ಬಳ್ಳಾರಿ: ಕೇಂದ್ರ ಸರ್ಕಾರ ರೖತ-ಕಾರ್ಮಿಕರ ವಿರೋಧಿಯಾದ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ 2025ಯನ್ನು ಸಂಸತ್ತಿನ ಅಧಿವೇಶನದಲ್ಲಿ ಮಂಡಿಸುತ್ತಿರುವುದನ್ನು ಖಂಡಿಸಿ ಎಐಪಿಎಫ್, ಎಐಕೆಕೆಎಂಎಸ್, ಎಐಯುಟಿಯುಸಿ ಹಾಗೂ ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘಗಳ ಮುಖಂಡರು ಜಂಟಿಯಾಗಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮಸೂದೆಯ ನಿಬಂಧನೆಗಳು ದೇಶಾದ್ಯಂತ ನೌಕರರು, ಕಾರ್ಮಿಕರು, ವಿದ್ಯುತ್ ಗ್ರಾಹಕರು, ರೈತರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿವೆ. ಜನರ ತೆರಿಗೆ ಹಣದಿಂದ ನಿರ್ಮಿಸಲಾದ ಈ ಬೃಹತ್ ಉದ್ದಿಮೆಯನ್ನು ಮುಖ್ಯವಾಗಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಖಾಯಂ ಉದ್ಯೋಗ ವಿಲ್ಲದೆ ಸಂಕಷ್ಟದಲ್ಲಿರುವ ಗುತ್ತಿಗೆ ಕಾರ್ಮಿಕರ ಬದುಕನ್ನು ಇನ್ನಷ್ಟು ಅಭದ್ರತೆಗೆ ತಳ್ಳಿದಂತಾಗುತ್ತದೆ. ಸೇವಾ ಪರಿಸ್ಥಿತಿಗಳ ಕಡಿತ, ಉದ್ಯೋಗ ಕಡಿತ ಇವು ತಲೆ ದೂರತ್ತವೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಪಿಎಫ್ ಜಿಲ್ಲಾ ಮುಖಂಡ ಡಾ. ಪ್ರಮೋದ್, ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘದ ಜಿಲ್ಲಾ ಮುಖಂಡ ಆರ್. ಸೋಮಶೇಖರ್ ಗೌಡ ಹಾಗೂ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ರೈತರು ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಕೈಗೆಟುಕುವ ವಿದ್ಯುತ್ ಅನ್ನು ಹೆಚ್ಚಾಗಿ ಅವಲಂಬಿಸಿವೆ. ಖಾಸಗೀಕರಣವು ಸುಂಕಗಳನ್ನು ಹೆಚ್ಚಿಸಲು ಮತ್ತು ಪ್ರಸ್ತುತ ಕೃಷಿ ಮತ್ತು ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸುವ ಸಬ್ಸಿಡಿಯನ್ನು ದುರ್ಬಲಗೊಳಿಸುತ್ತವೆ ಎಂದು ತಿಳಿಸಿದರು.ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ. ದೇವದಾಸ್, ಉಪಾಧ್ಯಕ್ಷೆ ಎ. ಶಾಂತಾ, ಎಐಪಿಎಫ್ ನ ಕಿರಣ್ ಕುಮಾರ್, ಮುಖಂಡರಾದ ಹನುಮಪ್ಪ, ಶರ್ಮಾಸ್, ಸುರೇಶ್, ಚೇತನ್, ಮುರಳಿಕೃಷ್ಣ ಮತ್ತಿತರರಿದ್ದರು.

ಇದೇ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಪ್ರಸ್ತಾಪಿತ ವಿದ್ಯುತ್ ಮಸೂದೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.