ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ತಾಲೂಕಿನ ಗೊರವನಹಳ್ಳಿ ಗ್ರಾಪಂ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಗ್ರಾಮದ ಮುಖಂಡ ಕೆ.ಚೆನ್ನಪ್ಪ ಹಾಗೂ ಯೋಗೇಶ್ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಧಾವಿಸಿದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಜನಪ್ರತಿಗಳ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ವೇಳೆ ಸ್ಥಳಕ್ಕೆ ಧಾವಿಸಿದ ಅಧ್ಯಕ್ಷೆ ಗೌರಮ್ಮರನ್ನು ಘೇರಾವ್ ಹಾಕಿದರು.
ಗ್ರಾಮದ ಹೊರವಲಯದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಎಂಆರ್‌ಎಫ್ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಭೂಮಿ ಪೂಜೆ ಮಾಡಿರುವ ಶಾಸಕರ ನಡೆಯನ್ನು ತೀವ್ರವಾಗಿ ಖಂಡಿಸಿದರು.ಈ ಹಿಂದೆ ಸ್ಮಶಾನ ಭೂಮಿಗೆ ಮೀಸಲಿಟ್ಟ 55 ಗುಂಟೆ ಜಮೀನಿನಲ್ಲಿ 16 ಗುಂಟೆಯನ್ನು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗಿತ್ತು. ಈಗ ಮತ್ತೆ 13 ಗುಂಟೆ ವಶಪಡಿಸಿಕೊಂಡಿರುವುದು ಸರಿಯಲ್ಲ ಎಂದು ಮಾತುಕತೆ ನಡೆಸಲು ಬಂದ ಗ್ರಾಪಂ ಪಿಡಿಒ ಪೂರ್ಣಿಮಾರನ್ನು ತರಾಟೆಗೆ ತೆಗೆದುಕೊಂಡರು.
5 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಯಾರೇ ಮೃತಪಟ್ಟರು ಅಂತ್ಯಕ್ರಿಯೆ ನಡೆಸಲು ಇರುವುದು ಇದೊಂದೇ ಸ್ಮಶಾನ. ಈಗ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಒಂದು ವೇಳೆ ಕಾಮಗಾರಿ ನಡೆಸಿದರೆ ತಡೆಗಟ್ಟುವ ಚಳುವಳಿ ಹಮ್ಮಿಕೊಳ್ಳಲಾಗುವುದು. ಕಾಮಗಾರಿಗೆ ಅಡ್ಡಿಪಡಿಸಿ ಶವಗಳೊಂದಿಗೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಗ್ರಾಪಂ ಸದಸ್ಯರು ಹಣದ ಅಮಿಷಕ್ಕೆ ಬಲಿಯಾಗಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿದ್ದೀರಿ ಎಂದು ಗ್ರಾಮದ ಮಹಿಳೆಯರು ಗ್ರಾಪಂ ಅಧ್ಯಕ್ಷ ಗೌರಮ್ಮರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರ ಕೊಡಲಾಗದೇ ಪೊಲೀಸರ ಬೆಂಬಲದೊಂದಿಗೆ ಅಧ್ಯಕ್ಷೆ ಗ್ರಾಪಂ ಕಚೇರಿ ಕೊಠಡಿಯೊಳಗೆ ಸೇರಿಕೊಂಡು ರಕ್ಷಣೆ ಮಾಡಿಕೊಂಡರು. ನಂತರ ಪಿಡಿಒ ಪೂರ್ಣಿಮಾ ಧರಣಿ ನಿರತರ ಮನವಿ ಸ್ವೀಕರಿಸಿದರು.ಗ್ರಾಪಂ ಸದಸ್ಯರ ತುರ್ತು ಸಭೆ ಕರೆದು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡದಂತೆ ಸಭೆಯಲ್ಲಿ ತೀರ್ಮಾನ ಕೈಗೊಂಡ ನಂತರ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಚೆನ್ನಪ್ಪ, ಎ.ರಾಜು, ನಾಗಮಲ್ಲಯ್ಯ, ಉಮೇಶ, ಸೋಮಶೇಖರ, ರವಿ, ಶಾಂತಕುಮಾರ, ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು..