ರಾಜ್ಯದ 9 ವಿವಿ ಮುಚ್ಚುವ ನಿರ್ಧಾರ ಖಂಡಿಸಿ ಪ್ರತಿಭಟನೆ

| Published : Feb 26 2025, 01:02 AM IST

ಸಾರಾಂಶ

ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬೋರ್ಡ್‌ ಇಟ್ಟು ಪಾಠ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬೋರ್ಡ್‌ ಇಟ್ಟು ಪಾಠ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಶಿಕ್ಷಣ ಹೊರೆಯಲ್ಲ. ಅದು ಸರ್ಕಾರಗಳ ಜವಾಬ್ದಾರಿ, ಸರ್ಕಾರಗಳು ಸಮಸ್ಯೆಗಳ ಬಗ್ಗೆ ಮಾತನಾಡದೆ ಪರಿಹಾರದ ಬಗ್ಗೆ ಮಾತನಾಡಬೇಕು. ಸರ್ಕಾರ ಬರುವ ಬಜೆಟ್‌ ನಲ್ಲಿ ಹೊಸ ವಿಶ್ವ ವಿದ್ಯಾಲಯಗಳಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಸಚಿವರು, ಶಾಸಕರು ವಿವಿಗಳಿಂದ ಲಾಭವಿಲ್ಲ ಎನ್ನುವ ರೀತಿ ಮಾತನಾಡುತ್ತಾರೆ. ಆದರೆ ವಿಶ್ವ ವಿದ್ಯಾಲಯಗಳು ಲಾಭಾಂಶ ನೀಡುವ ಕಾರ್ಖಾನೆಗಳಲ್ಲ. ಶಿಕ್ಷಣ ನೀಡುವ ಸೇವಾ ಕೇಂದ್ರಗಳು. ಶಿಕ್ಷಣದ ಮೂಲ ಆಶಯಕ್ಕೆ ಹಿನ್ನಡೆ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದ ಅವರು, ಎಬಿವಿಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದೆ ಎಂದು ಹೇಳಿದರು.ನಗರ ಕಾರ್ಯದರ್ಶಿ ವಿಪುಲ ಪೆಟಕರ್ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲಭೂತ ಸೌಲಭ್ಯಕ್ಕೆ ಅನುದಾನವನ್ನು ನೀಡಿ ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕಾಗಿ ಅನುದಾನ ನೀಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಿದೆ ಎಂದರು.

ನಗರ ಸಂಘಟನಾ ಕಾರ್ಯದರ್ಶಿ ಹನಮಂತ್ ಹಳ್ಳೂರು, ನಗರ ಕಾರ್ಯದರ್ಶಿ ವಿಪುಲ್ ಪೇಟಕರ, ನಗರ ಸಹ ಕಾರ್ಯದರ್ಶಿ ವೈಭವ ಹಂದ್ರಾಳ, ಪ್ರದೀಪ ಆನದಿನ್ನಿ, ಕೃಷ್ಣಾ, ರವಿ , ಮಲ್ಲಿಕಾರ್ಜುನ್, ವಿವೇಕ್ , ಮಲ್ಲಿಕಾರ್ಜುನ ,ಕುಸುಮಾ ಇದ್ದರು.