ಇಂದು ಜಿಲ್ಲಾ ಸಚಿವರ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ

| Published : Oct 31 2023, 01:16 AM IST

ಸಾರಾಂಶ

ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಾರದಲ್ಲಿ ಎರಡು, ಮೂರು ದಿನ ಶಿವಮೊಗ್ಗಕ್ಕೆ ಬರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಒಮ್ಮೆಯೂ ಭದ್ರಾವತಿಗೆ ಬಂದಿಲ್ಲ, ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಭದ್ರಾವತಿ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇದನ್ನು ಖಂಡಿಸಿ ಅ.31ರಂದು ಭದ್ರಾವತಿಯಲ್ಲಿ ಅಂಬೇಡ್ಕರ್ ಭವನದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್‌.ರಾಜು ಹೇಳಿದರು. ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭದ್ರಾವತಿಯಲ್ಲಿ ಸಾಕಷ್ಟು ಕಾಮಗಾರಿಗಳು ಅರೆಬರೆಯಾಗಿ ನಿಂತಿವೆ. ಎಷ್ಟೇ ಮನವಿ ಸಲ್ಲಿಸಿದರೂ ಕೆಲಸವಾಗುತ್ತಿಲ್ಲ. ಅನೇಕ ಕಾಮಗಾರಿಗಳು ಕಳಪೆಮಟ್ಟದಲ್ಲಿ ನಡೆಯುತ್ತಿವೆ. ಅವರನ್ನು ಭೇಟಿ ಮಾಡಿ ಭದ್ರಾವತಿಗೆ ಬರುವಂತೆ ಆಹ್ವಾನಿಸಿದರೂ ಭದ್ರಾವತಿಗೆ ಬಂದಿಲ್ಲ. ಕೇವಲ ಶಿವಮೊಗ್ಗ, ಸಾಗರ, ಸೊರಬ, ಶಿಕಾರಿಪುರಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಪ್ರೌಢಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿದ್ದರೂ, ಕೆಲವೆಡೆ ಶಿಕ್ಷಕರೇ ಹಾಳು ಮಾಡಿ ಶಾಲೆಗೆ ಸರಿಯಾಗಿ ಬರುವುದಿಲ್ಲ. ಹೀಗಾಗಿ ಶಾಲೆಗಳಿಗೆ ಬಯೋಮೆಟ್ರಿಕ್‌ ಜೊತೆ ಸಿಸಿ ಕ್ಯಾಮೆರಾ ವ್ಯವಸ್ಥೆ ಅವಳಡಿಸಬೇಕು. ಈ ಬಗ್ಗೆ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಐ.ಎಲ್‌.ಅರುಣ್‌ಕುಮಾರ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಅಕ್ರಂ ಪಾಶ, ಸಂಚಾಲಕ ಅಜಿತ್, ಅಜಯ್, ಶಿವಕುಮಾರ್, ಬಸವರಾಜ ಮೊದಲಾದವರಿದ್ದರು. - - - ಬಾಕ್ಸ್ ರಾಜಕಾರಣಿಗಳಿಗೆ ಏಕೆ ಸನ್ಮಾನ? ದೇಶದ ಆಸ್ತಿಯಾಗಿದ್ದ ವಿಐಎಸ್‌ಎಲ್‌ ಕಾರ್ಖಾನೆ ಅಭಿವೃದ್ಧಿಗೆ ಯಾವ ಪಕ್ಷದ ನಾಯಕರು ಏನನ್ನೂ ಮಾಡಿಲ್ಲ. ಶಿವಮೊಗ್ಗ ವಿಮಾಣ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ವಿಐಎಸ್‌ಎಲ್‌ ಕಾರ್ಖಾನೆ ಉಳಿವಿನ ಬಗ್ಗೆ ಒಂದೇ ಒಂದು ಮಾತನನ್ನು ಆಡಿಲ್ಲ. ಸಂಸದ ಬಿ.ವೈ.ರಾಘವೇಂದ್ರ ಶಿಕಾರಿಪುರ ಕ್ಷೇತ್ರಕ್ಕೆ ತೋರಿಸುವ ಆಸಕ್ತಿ ವಿಐಎಸ್‌ಎಲ್‌ ಕಾರ್ಖಾನೆ ಅಭಿವೃದ್ಧಿಗೆ ತೋರಿಸಿಲ್ಲ. ಕಾರ್ಖಾನೆ ವಿಚಾರವಾಗಿ ಅವರು ಬರೀ ಸುಳ್ಳನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್‌.ರಾಜು ಆರೋಪಿಸಿದರು. ಈಗ ಚಿತ್ರನಟ ದೊಡ್ಡಣ್ಣ ನೇತೃತ್ವದಲ್ಲಿ ವಿಐಎಸ್‍ಎಲ್ ಶತಮಾತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಖಾನೆಯನ್ನು ಹಾಳು ಮಾಡಿದ ರಾಜ್ಯದ ಮತ್ತು ಕೇಂದ್ರದ ಸಚಿವರು, ರಾಜಕಾರಣಿಗಳನ್ನು ಆಹ್ವಾನಿಸಿದ್ದಾರೆ. ಜೊತೆಗೆ ಕೇಂದ್ರ ಸಚಿವರಿಗೆ, ಸಿಎಂ, ಡಿಸಿಎಂ. ಸಂಸದರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಾರ್ಖಾನೆ ಅಭಿವೃದ್ಧಿಗೆ ನಯಾಪೈಸೆ ಕೆಲಸ ಮಾಡದೇ ಕಾರ್ಖಾನೆ ಅವನತಿಗೆ ಕಾರಣ ಆದವರಿಗೆ ಸನ್ಮಾನ ಸ್ವೀಕರಿಸುವ ನೈತಿಕತೆ ಇದೆಯೇ? ಯಾವುದೇ ಸನ್ಮಾನವನ್ನು ಅವರು ಸ್ವೀಕರಿಸಬಾರದು. ಸನ್ಮಾನಿಸಿದರೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.