ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ 51 ಲಕ್ಷ ರೈತರಿಗೆ 6 ಸಾವಿರ ರು. ಗಳನ್ನು ವಾರ್ಷಿಕವಾಗಿ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಶಿರಾ
ಕಾಂಗ್ರೆಸ್ ಸರ್ಕಾರದ ದುರಾಡಳಿತ, ರೈತ ವಿರೋಧ ಆಡಳಿತವನ್ನು ವಿರೋಧಿಸಿ ನ. 28ರ ಶುಕ್ರವಾರದಂದು ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಕೇಂದ್ರ ಸರಕಾರ ಉತ್ತಮ ಆಡಳಿತ ಮಾಡುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ 51 ಲಕ್ಷ ರೈತರಿಗೆ 6 ಸಾವಿರ ರು. ಗಳನ್ನು ವಾರ್ಷಿಕವಾಗಿ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು 3.7 ಲಕ್ಷ ಕೋಟಿ ಹಣವನ್ನು ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ - ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 1.75 ಲಕ್ಷ ಕೋಟಿ ಹಣವನ್ನು ದೇಶದ ರೈತರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ 60 ವರ್ಷದ ನಂತರ ಪಿಂಚಣಿ ರೂಪದಲ್ಲಿ ಮಾಸಿಕ 3 ಸಾವಿರವನ್ನು ನೀಡಲಾಗುತ್ತದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ಹಣವನ್ನು ನೀಡಲಾಗಿದೆ. 25 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ದೇಶದಲ್ಲಿ ಹನಿ ನೀರಾವರಿಯನ್ನು ಪ್ರೋತ್ಸಾಹಿಸಲು ಪ್ರಧಾನಮಂತ್ರಿ ಕೃಷಿ ಸಿಂಚಾ ಯೋಜನೆ ಅಡಿಯಲ್ಲಿ 93 ಸಾವಿರ ಕೋಟಿ ಹಣವನ್ನು ನೀಡಲಾಗಿದೆ. ಇದೇ ರೀತಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಯಾವುದೇ ಇಲಾಖೆಯಲ್ಲೂ ಸಾರ್ವಜನಿಕರ, ರೈತರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ಸರಕಾರವನ್ನು ಎಚ್ಚರಿಸಲು ಬಿಜೆಪಿ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಎಂದರು.ಪತ್ರಿಕಾಗೊಷ್ಠಿಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ಹಿರಿಯ ಮುಖಂಡರಾದ ಮದ್ದೇವಳ್ಳಿ ರಾಮಕೃಷ್ಣಪ್ಪ, ರೈತ ಮೋರ್ಚಾ ಅಧ್ಯಕ್ಷರಾದ ಬಸವರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಿಕ್ಕಣ್ಣ, ನಗರ ಸಭೆ ಮಾಜಿ ಸದಸ್ಯರಾದ ನಟರಾಜ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಉಪಾಧ್ಯಕ್ಷರಾದ ಬೋಪ್ಪರಾಯಪ್ಪ ಮತ್ತು ನಾಗರಾಜ್ ಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಶಿವಣ್ಣ, ಯುವ ಮೋರ್ಚಾ ಅಧ್ಯಕ್ಷರಾದ ಹರೀಶ್, ಎಸ್ಸಿ ಮೋರ್ಚಾ ಲಿಂಗರಾಜು, ಮಹಿಳಾ ಮೋರ್ಚಾ ಕವಿತಾ, ಶೋಭಾ, ಶಕುಂತಲಮ್ಮ, ಸೈಯದ್ ಬಾಬಾ, ಗುರುರಾಜ್ ನಾಯ್ಕ, ಸೇಲ್ಸ್ ರಂಗಪ್ಪ, ಧೀರೇಶ್ ಸೇರಿದಂತೆ ಹಲವರು ಹಾಜರಿದ್ದರು.
೨೭ಶಿರಾ೧: ಶಿರಾ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.