ಸಾರಾಂಶ
ಧಾರವಾಡ:
ಧಾರವಾಡ ಜಿಲ್ಲೆಯಲ್ಲಿ ನಡೆದಿರುವ ಹೆಣ್ಣುಮಕ್ಕಳ ಹತ್ಯೆ ಖಂಡಿಸಿ ಎಐಎಂಎಸ್ಸೆಸ್ ಮತ್ತು ಎಐಡಿವೈಒ ಸಂಘಟನೆಗಳು ನಗರದ ಸುಭಾಸ್ ರಸ್ತೆಯ ವಿವೇಕಾನಂದ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಎಐಎಂಎಸ್ಸೆಸ್ ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ, ಉನ್ನತ ನೀತಿ-ನೈತಿಕತೆ, ಸಂಸ್ಕೃತಿ, ನೈಜ್ಯ ಪ್ರೀತಿ ಭಾವನೆಯ ಪರಿಕಲ್ಪನೆಗಳ ಜ್ಞಾನದ ಕೊರತೆ ಯುವಸಮುದಾಯವನ್ನು ಬಲವಾಗಿ ಕಾಡುತ್ತಿದೆ. ಆಳುವ ಸರ್ಕಾರಗಳ ಕುಮ್ಮಕ್ಕಿನೊಂದಿಗೆ ಇಂದಿನ ಸಿನಿಮಾ, ಸಾಹಿತ್ಯ, ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಭಿತ್ತರವಾಗುತ್ತಿರುವ ಹಿಂಸೆ, ಕ್ರೌರ್ಯ, ಅಶ್ಲೀಲತೆ ಹಾಗೂ ಮದ್ಯ, ಮಾದಕ ದ್ರವ್ಯಗಳ ಹಾವಳಿ ಯುವಜನರ ಮನಸ್ಥಿತಿ ಕಲುಷಿತ ಮಾಡುತ್ತಿವೆ. ಹಾಗಾಗಿ ಅತ್ಯಾಚಾರ, ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಮೃಗಿಯ ಹತ್ಯೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳಲ್ಲಿ ನಡೆದ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣ, ಹುಬ್ಬಳ್ಳಿಯಲ್ಲಿ ನಡೆದ ನೇಹಾ-ಅಂಜಲಿ ಹತ್ಯೆ ಪ್ರಕರಣ, ಕೊಡಗಿನ ಮೀನಾಳ ರುಂಡ ಕತ್ತರಿಸಿದ ಹೇಯ ಕೃತ್ಯ ಸಮಾಜದಲ್ಲಿ ತೀವ್ರ ಅಘಾತದ ಅಲೆಯೆಬ್ಬಿಸಿವೆ. ಈ ಘಟನೆಗಳು ಜಿಲ್ಲೆ, ರಾಜ್ಯದಲ್ಲಿ ಅಷ್ಟೇ ಅಲ್ಲದೇ ಇಡೀ ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಇದರಿಂದ ಆಘಾತಕ್ಕೊಳಗಾದ ಸಾಮಾನ್ಯ ಜನರು ಹೆಣ್ಣುಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಕಳಿಸುವ ಬಗ್ಗೆ ಯೋಚಿಸುವಂತಾಗಿದೆ. ಇಂತಹ ಘಟನೆಗಳನ್ನು ರಾಜಕೀಯ ಪಕ್ಷಗಳು ತಮ್ಮ ವೈಯುಕ್ತಿಕ ಹಿತಾಸಕ್ತಿ, ಚುನಾವಣಾ ರಾಜಕೀಯಕ್ಕೆ ಜಾತಿ- ಧರ್ಮದ ಲೇಪನ ಹಚ್ಚಿ ದಾಳವಾಗಿ ಬಳಸಿಕೊಳ್ಳುತ್ತಿರುವುದು ಇನ್ನೂ ಹೇಯ. ಜನಸಾಮಾನ್ಯರು ಇಂತಹ ಘಟನೆಗಳಿಗೆ ಮೂಲ ಕಾರಣವೇನು, ತಡೆಗಟ್ಟಲು ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕಡೆ ಆಲೋಚಿಸುವಂತಾಗಬೇಕು ಎಂದರು.ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿ ಶಂಕರ ಮಾತನಾಡಿ, ಹೆಣ್ಣುಮಕ್ಕಳ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಇಂತಹ ಘಟನೆಗಳಿಂದ ಸಮಾಜ ಎತ್ತ ಸಾಗುತ್ತಿದೆ ಎಂದು ನೋವಾಗುತ್ತಿದೆ. ಯುವಸಮುದಾಯದಲ್ಲಿ ಸೂಕ್ಷ್ಮ ಸಂವೇದನೆ, ಆತ್ಮವಿಶ್ವಾಸ, ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವುದರ ಸಂಕೇತವೇ ಇಂತಹ ಮೃಗಿಯ ಘಟನೆಗಳು. ಇಂದು ಯುವಕ-ಯುವತಿಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚು ಬಾಧಿಸುತ್ತಿದೆ. ಇದರ ಪರಿಣಾಮವಾಗಿ ಕ್ರೂರವಾಗಿ ಹತ್ಯೆಗೈಯುವುದು, ಆತ್ಮಹತ್ಯೆಗೆ ಶರಣಾಗುವಿಕೆ ಸರ್ವೆಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ ಸಂಘಟಿತ ಸಾಮಾಜಿಕ-ಸಾಂಸ್ಕೃತಿಕ ಚಳವಳಿಗಳನ್ನು ಕಟ್ಟಲು ಪ್ರತಿಯೊಬ್ಬರೂ ಮುಂದೆ ಬರಬೇಕು ಎಂದರು.
ಸಂಘಟಕರಾದ ಗಂಗೂಬಾಯಿ ಕೋಕರೆ, ರಣಜಿತ್ ದೂಪದ, ಅಕ್ಷಯ್ ಊರಮುಂದಿನ್, ಪ್ರೀತಿ ಸಿಂಗಾಡೆ, ಸಿಮೋನ್ ಸೂರ್ಯವಂಶಿ, ಪವಿತ್ರಾ ಮಾಳಾಪುರ, ಲಕ್ಷ್ಮಿ ವಡ್ಡರ್ ಇದ್ದರು.