ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಐದಾರು ಕೋಟಿ ಬೆಲೆ ಬಾಳುವ ಅನೇಕ ರೈತರು ಸೇರಿ ಬೆಳೆದ ಅಡಿಕೆಯನ್ನು ಒಂದು ಕಡೆ ಗೋದಾಮಿನಲ್ಲಿ ಶೇಖರಣೆ ಮಾಡಲಾಗಿದ್ದು, ಈ ವೇಳೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯಾವ ಕಾರಣ ನೀಡದೇ ಏಕಾಏಕಿ ದಾಳಿ ನಡೆಸಿ ಅಡಿಕೆ ಶೇಖರಣೆಯ ಗೋದಾಮಿಗೆ ಬೀಗ ಹಾಕಿರುವುದಕ್ಕೆ ಇದನ್ನ ಖಂಡಿಸಿ ಫೆ.೨೧ರಿಂದ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡುವುದಾಗಿ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಾವುಗಳೆಲ್ಲಾ ಅಡಿಕೆ ಬೆಳೆಗಾರರು. ಹಸಿ ಅಡಿಕೆಯನ್ನು ತೋಟದಲ್ಲಿ ಬೆಳೆದು ಅದನ್ನೆಲ್ಲಾ ಒಂದು ಕಡೆ ಸಾಗಿಸಿ ಎಣೆದು ಬೇಯಿಸಿ ಬಣ್ಣಕಟ್ಟಿ ಒಂದು ಕಡೆ ಗೋದಾಮಿನಲ್ಲಿ ಶೇಖರಣೆ ಮಾಡಿದ ನಂತರ ಸಿಮೆಂಟ್ ಕಣದಲ್ಲಿ ಒಣಗಿದ ಮೇಲೆ ಸ್ಟೋರ್ ಮಾಡಲಾಗುತ್ತದೆ. ನಮ್ಮಲ್ಲಿ ಲೇಬರ್ ಕೊರತೆ, ಸರಿಯಾದ ರೀತಿ ತೂಕದ ಮಷಿನ್ ರೈತರ ಬಳಿ ಇರುವುದಿಲ್ಲ. ಇದರಂದಲೇ ಕ್ಲಬ್ಬಾಗಿ ೫೦ರಿಂದ ೧೦೦ ಜನ ಒಂದು ಕಡೆ ಅದನ್ನು ದಾಸ್ತಾನು ಮಾಡಲಾಗುತ್ತದೆ. ಚೀಲದ ಸಂಖ್ಯೆ, ಪಹಣಿ ಎಲ್ಲವೂ ಅಲ್ಲೇ ಇದೆ. ಆದರೆ ಆದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಡಿಕೆ, ಗೂಡ್ಸ್ ಆಟೋ ಸಹಿತ ಸುಮಾರು ೫-೬ ಕೋಟಿ ರು. ಮೌಲ್ಯದ ಅಡಿಕೆಯನ್ನು ಸೀಜ್ ಮಾಡಿದ್ದಾರೆ ಎಂದು ದೂರಿದರು. ಇದಾದ ಬಳಿಕ ನಾವು ಪ್ರಶ್ನೆ ಮಾಡಿದರೆ ಯಾವುದೇ ಉತ್ತರ ನೀಡುತ್ತಿಲ್ಲ. ಕಳೆದ ವಾರ ಅಡಕೆ ಬೆಳೆದಿರುವ ರೈತರ ಪಹಣಿ, ಫ್ರೂಟ್ ಐಡಿ ಸೇರಿ ಸಂಬಂಧಪಟ್ಟ ದಾಖಲೆ ನೀಡಿದ್ದರೂ ಅದನ್ನೂ ಪರಿಶೀಲಿಸಿಲ್ಲ, ಮೇಲಧಿಕಾರಿಗಳು ಇರುವ ಶಿವಮೊಗ್ಗಕ್ಕೆ ಹೋಗಿ ಎನ್ನುತ್ತಾರೆ ಎಂದು ಆರೋಪಿಸಿದರು. ಅಕಸ್ಮಾತ್ ಮಳೆ ಬಂದರೆ ೧೯೦೦ ಚೀಲ ಅಡಕೆಯೂ ಹಾಳಾಗಲಿದೆ. ಅದರ ನಷ್ಟ ಕಟ್ಟಿ ಕೊಡುವವರು ಯಾರು ಎಂದು ಪ್ರಶ್ನಿಸಿದರು. ಗೋದಾಮು ಸೀಜ್ ಮಾಡಿದ ನಂತರ ಅಧಿಕಾರಿಗಳು ರೈತರ ತೋಟಗಳಿಗೆ ಹೋಗಿ ಗೋದಾಮು ಮಾಲೀಕ ಲೋಕೇಶ್ ಎಂಬುವರ ಮೇಲೆ ದೂರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ. ಉದಾಹರಣೆಗೆ ಯಾರೋ ಮಾಲೀಕರು ಮೋಟಾರ್ ಅಳವಡಿಸಿಕೊಂಡು ಶುಂಠಿ ಸ್ವಚ್ಛ ಮಾಡುವಾಗ ಹಲವು ರೈತರು ಶುಂಠಿ ತಂದು ರಾಶಿ ಹಾಕುತ್ತಾರೆ. ಅದನ್ನು ಸೀಜ್ ಮಾಡಿದರೆ ಹೇಗೆ ಎಂದು ಕೇಳಿದರು.
ಗೋದಾಮು ಮಾಲೀಕರೋ ಅಥವಾ ರೈತರೋ ಅಡಿಕೆ ಸಾಗಣೆ ಮಾಡುವಾಗ ಹಿಡಿದರೆ ನಮ್ಮ ತಕರಾರು ಇಲ್ಲ. ಆದರೆ ಸಂಗ್ರಹ ಮಾಡಿರುವ ಅಡಕೆಯನ್ನು ಯಾವುದೇ ಮಾರಾಟ ಮಾಡದೆ ಹದಗೊಳಿಸಲು ದಾಸ್ತಾನು ಮಾಡಿದ್ದನ್ನು ಸೀಜ್ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅಡಿಕೆ ಅಗತ್ಯ ವಸ್ತು ಕಾಯ್ದೆ ಅಡಿ ಬರಲಿದ್ದು, ಪೂರಕ ದಾಖಲೆ ಕೊಟ್ಟರೂ ರೈತರು ಅಡಿಕೆ ಪಡೆಯಲು ಬಿಡುತ್ತಿಲ್ಲ. ಹೀಗಾಗಿ ಅಧಿಕಾರಿಗಳ ವರ್ತನೆ ಖಂಡಿಸಿ ಫೆ.೨೧ರಿಂದ ಪ್ರತಿಭಟನೆಗೆ ನಿರ್ಧಾರ ಮಾಡಿದ್ದೇವೆ ಎಂದರು.ಗೋದಾಮು ಮಾಲೀಕರು ೧೨ ಕೆ.ಜಿ. ಒಣ ಅಡಿಕೆ ಕೊಡುತ್ತಾರೆ. ಅದನ್ನು ನಾವು ಮಾರಾಟ ಮಾಡಿ ಜೀವನೋಪಾಯ ನಡೆಸುತ್ತಿದ್ದೇವೆ. ಅದಕ್ಕೂ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ನಾವು ಹೆಚ್ಚು ಅಡಿಕೆ ಮಾರಾಟ ಮಾಡಿದರೆ ಜಿಎಸ್ಟಿ ವಿಧಿಸಲಿ, ಅದು ಬಿಟ್ಟು ಇನ್ನೂ ಸಂಗ್ರಹಣಾ ಹಂತದಲ್ಲಿರುವಾಗ ಗೋದಾಮಿಗೆ ಬೀಗ ಹಾಕಿದರೆ ನಮ್ಮ ಬದುಕು ನಡೆಯುವುದು ಹೇಗೆ ಎಂದರು. ಈಗ ದಾಸ್ತಾನು ಮಾಡಿ, ಅಡಕೆ ಸಿದ್ಧವಾದಾಗ ಹಾಗೂ ಬೇಡಿಕೆ ಬಂದಾಗ ಮಾರ್ಕೆಟಿಂಗ್ ಮಾಡುತ್ತೇವೆ ಎಂದರು.
ರೈತ ಸಂಘದ ಯೋಗಣ್ಣ, ಮುಖಂಡರಾದ ವೀರೇಂದ್ರ, ಗಂಗಾಧರ, ಗೋದಾಮು ಮಾಲೀಕ ಲೋಕೇಶ್, ನಾಗೇಶ್, ಇತರರು ಉಪಸ್ಥಿತರಿದ್ದರು.