ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಪಡಸಾವಳಿ ಗ್ರಾಮದ ನಿವಾಸಿ, ಗ್ರಾಪಂ ಮಾಜಿ ಸದಸ್ಯ ಹಾಗೂ ಕೋಲಿ ಸಮಾಜದ ತಾಲೂಕು ಗೌರವ ಅಧ್ಯಕ್ಷರಾಗಿದ್ದ ವಿಶ್ವನಾಥ ಜಮಾದಾರ ಅವರನ್ನು ಶುಕ್ರವಾರ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಖಂಡಿಸಿ, ಪಟ್ಟಣದ ಹಳೆಯ ಚೆಕ್‌ಪೋಸ್ಟ್‌ನಲ್ಲಿ ಶನಿವಾರ ಕೋಲಿ ಸಮಾಜ ಬಾಂಧವರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಸೆ.೧೩ರಂದು (ಶುಕ್ರವಾರ) ಆಳಂದ ತಾಲೂಕಿನ ಕೋಲಿ ಸಮಾಜದ ಗೌರವಧ್ಯಕ್ಷರಾದ ಪಡಸಾವಳಿ ನಿವಾಸಿ ವಿಶ್ವನಾಥ ಜಮಾದಾರರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಸರ್ಕಾರದಿಂದ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡಬೇಕೆಂದು ಸಮಾಜ ಮುಖಂಡರು ಒತ್ತಾಯಿಸಿದರು.
ಕೊಲೆಗಿಡಾದ ವಿಶ್ವನಾಥರ ಕುಟುಂಬಕ್ಕೆ ಸರ್ಕಾರಿ ನೌಕರಿ ಕೋಡಬೇಕು ಹಾಗೂ ಮೃತರ ಕುಟುಂಬಕ್ಕೆ ಸೂಕ್ತವಾದ ರಕ್ಷಣೆ ನೀಡಬೇಕು ಮತ್ತು ಆರೋಪಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು. ಈ ಕುರಿತು ಪಾರದರ್ಶಕ ತನಿಖೆ ಆಗಬೇಕು, ಪ್ರಕರಣದ ಬೆಳವಣಿಗೆಯಲ್ಲಿ ಪೊಲೀಸರ ನಡೆಯನ್ನು ನಮಗೆ ಸಂಶಯ ಮೂಡುತ್ತಿದೆ. ಆದ್ದರಿಂದ ಪೊಲೀಸ ವರಿಷ್ಠಾಧಿಕಾರಿಗಳು ಪಾರದರ್ಶಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕೆಂಬ ಆಗ್ರಹ ಕೇಳಿಬಂದವು.ಪಾರ್ಥಿವ ಶರೀರ ಮರಳಿ ತರಲು ಪಟ್ಟು:
ವಿಶ್ವನಾಥ ಜಮಾದಾರ ಅವರ ಕೊಲೆಯಾದ ಬಳಿಕ ಶವ ಪರೀಕ್ಷೆಗೆಂದು ಶುಕ್ರವಾರ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮರುದಿನ ಶನಿವಾರ ಮಧ್ಯಾಹ್ನ ಮರಳಿ ಪಾರ್ಥಿವ ಶರೀರವನ್ನು ಪಡಸಾವಳಿ ಗ್ರಾಮಕ್ಕೆ ತರುವಾಗ ಪಟ್ಟಣದ ಚೆಕ್‌ಪೋಸ್ಟ್‌ನಲ್ಲಿ ಸಮಾಜದಿಂದ ಗೌರವ ಸಲ್ಲಿಸಲು ಸಮಾಜ ಬಾಂಧವರು ನಿಂತುಕೊಂಡಿದ್ದರು.ಆದರೆ ತರಾತುರಿಯಲ್ಲಿ ಪೊಲೀಸರು ಪಡಸಾವಳಿ ಗ್ರಾಮಕ್ಕೆ ಶವವನ್ನು ಸಾಗಿಸಿದ್ದಾರೆ ಎಂದು ಸಮಾಜ ಬಾಂಧವರು ಕುಪಿತಗೊಂಡು ಮರಳಿ ತರಬೇಕು. ಇಲ್ಲಿಯೇ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಗುವುದು ಎಂದು ಪಟ್ಟುಹಿಡಿದು ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕುಟುಂಬಕ್ಕೆ ಸರ್ಕಾರಿ ನೌಕರಿ ಮತ್ತು ಒಂದು ಕೋಟಿ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಗೆ ಬೆಂಬಲಿಸಿ ಮಾಜಿ ಶಾಸಕ ಸುಭಾಷ ಗುತ್ತೇದಾರ, ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಪಾಲ್ಗೊಂಡು ಕೊಲೆ ಘಟನೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ, ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮಜರುಗಿಸಿ ಮೃತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಮನವಿ ಸಲ್ಲಿಸಿದರು.ಕೋಲಿ ಸಮಾಜದ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ನ್ಯಾಯವಾದಿ ಸಿದ್ರಾಮಪ್ಪ ಮೇಳಕುಂದಿ ಸೇರಿದಂತೆ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಎಂ. ಜಮಾದಾರ, ಮುಖಂಡ ಕಲ್ಯಾಣಿ ಜಮಾದಾರ ಭೂಸನೂರ, ಸೀತಾರಾಮ ಜಮಾದಾರ, ಅಂಬರಾಯ ಜಮಾದಾರ ಚಿತಲಿ ಸೇರಿದಂತೆ ಕೊಲೆಯಾದ ವಿಶ್ವನಾಥ ಜಮಾದಾರ ಕುಟುಂಬ ಹಾಗೂ ಬಂಧು ಬಾಂಧವರು ಕೋಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ವಿಶ್ವನಾಥ ಜಮಾದಾರ ಕೊಲೆ ಘಟನೆಯನ್ನು ಸಿಪಿಐ ಮುಖಂಡ ಹಾಗೂ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಅವರು ತೀವ್ರವಾಗಿ ಖಂಡಿಸಿ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುವಂತೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.