ರೈತರ ಸಮಸ್ಯೆಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

| Published : Jan 13 2025, 12:45 AM IST

ಸಾರಾಂಶ

ರೈತರ ಬೇಡಿಕೆಗೆ ಸ್ಪಂದಿಸದೇ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ಪ್ರಧಾನಿ ಮೋದಿ, ಸಚಿವರಾದ ಅಮಿತ್ ಶಾ, ಶಿವರಾಜ ಸಿಂಗ್ ಚೌಹಾಣ್ ಭಾವಚಿತ್ರ, ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟಿಸಿತು.

- ಮಾರಕ ಕೃಷಿ ತಿದ್ದುಪಡಿ ಕಾಯ್ದೆ ಕೈಬಿಡಲು, ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ಒತ್ತಾಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ರೈತರ ಬೇಡಿಕೆಗೆ ಸ್ಪಂದಿಸದೇ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ಪ್ರಧಾನಿ ಮೋದಿ, ಸಚಿವರಾದ ಅಮಿತ್ ಶಾ, ಶಿವರಾಜ ಸಿಂಗ್ ಚೌಹಾಣ್ ಭಾವಚಿತ್ರ, ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟಿಸಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಒಕ್ಕೂಟ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತ ರೈತರು ಪ್ರಧಾನಿ, ಕೇಂದ್ರ ಸಚಿವರ ಭಾವಚಿತ್ರಗಳನ್ನು ಸುಟ್ಟು, ಕೇಂದ್ರದ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರು ಮಾತನಾಡಿ, ಪಂಜಾಬ್‌ನ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಂಚಾಲಕ, ರೈತ ಹೋರಾಟಗಾರ ಜಗಜಿತ್ ಸಿಂಗ್ ದಲೈವಾಲಾ 45 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ. ಆದರೂ, ಅವರ ಬಗ್ಗೆ ಅಸಡ್ಡೆ ತೋರಲಾಗುತ್ತಿದೆ. ಇದು ಕೇಂದ್ರದ ರೈತವಿರೋಧಿ ನೀತಿಯನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತಿದೆ ಎಂದರು.

ಕೇಂದ್ರ ಜಾರಿಗೆ ತಂದ ಮೂರೂ ಕರಾಳ ಕೃಷಿ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಗೆ ಕಾನೂನು ಮಾನ್ಯತೆ ನೀಡಬೇಕು ಎಂಬುದು ದಲೈವಾಲಾ ಬೇಡಿಕೆಯಾಗಿದೆ. ಅವರ ಆರೋಗ್ಯ ದಿಗ್ಯ ಕ್ಷೀಣಿಸುತ್ತಿದ್ದರೂ ಕೇಂದ್ರ ಚಕಾರ ಎತ್ತುತ್ತಿಲ್ಲ, ತನ್ನ ಪ್ರತಿನಿಧಿಗಳನ್ನಾದಲೂ ಧರಣಿ ಸ್ಥಳಕ್ಕೆ ಕಳಿಸುತ್ತಿಲ್ಲ. ಅನ್ನದಾತರೊಟ್ಟಿಗೆ ದಲೈವಾಲಾ ಹೋರಾಟದ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶ ಮಾಡಿದ್ರೂ, ರೈತವಿರೋಧಿ ಪ್ರಧಾನಿ, ಕೇಂದ್ರ ಸಚಿವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಸಂಘಟನೆ ಮುಖಂಡರಾದ ಬಲ್ಲೂರು ರವಿಕುಮಾರ, ಹಸಿರು ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪಗೌಡ, ನಿಟುವಳ್ಳಿ ಪೂಜಾರ ಅಂಜಿನಪ್ಪ, ಗುರುಮೂರ್ತಿ, ದಶರಥ, ಸೋಮನಗೌಡ, ಮಜುನಾಥ, ರಾಂಪುರ ಆರ್‌.ಜಿ.ಬಸವರಾಜ, ಅಶೋಕ ಇತರರು ಪಾಲ್ಗೊಂಡಿದ್ದರು. ಭೂತದಹನ, ಪ್ರಧಾನಿ, ಕೇಂದ್ರ ಸಚಿವರ ಭಾವಚಿತ್ರಕ್ಕೆ ರೈತರು ಬೆಂಕಿ ಸ್ಪರ್ಶ ಮಾಡುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಮಧ್ಯ ಪ್ರವೇಶಿಸಿ, ನಂದಿಸಿದರು.

- - - -12ಕೆಡಿವಿಜಿ11:

ದಾವಣಗೆರೆ ಜಯದೇವ ವೃತ್ತದಲ್ಲಿ ಕೇಂದ್ರ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ಪ್ರಧಾನಿ, ಕೇಂದ್ರ ಸಚಿವ ಭಾವಚಿತ್ರ, ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟಿಸಿತು.