ಸಾರಾಂಶ
ಕೂಡಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಶುಂಕ ಇಳಿಕೆ ಮಾಡುವ ಮೂಲಕ ಬೆಲೆ ಏರಿಕೆ ಇಳಿಸಬೇಕು. ರ‍್ಯಾಪಿಡೋ ಆಟೋ ನೀತಿ ಕೈಬಿಡಬೇಕು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಾಪಸ್ ಪಡೆಯಬೇಕು. ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ ನೀಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು.ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು, ದಲಿತ ಸಂಘಟನೆಗಳ ಮುಖಂಡರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ಕೂಡಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಶುಂಕ ಇಳಿಕೆ ಮಾಡುವ ಮೂಲಕ ಬೆಲೆ ಏರಿಕೆ ಇಳಿಸಬೇಕು ಎಂದು ಒತ್ತಾಯಿಸಿದರು.
ಆಟೋ ಚಾಲಕರ ಬೆಂಬಲ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮತ್ತು ರ‍್ಯಾಪಿಡ್ ಆಟೋ, ಬೈಕ್ ಸೇವೆ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಆಟೋ ಚಾಲಕರು ಮತ್ತು ಮಾಲೀಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.ಕೂಡಲೇ ರ‍್ಯಾಪಿಡೋ ಆಟೋ ನೀತಿ ಕೈಬಿಡಬೇಕು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಾಪಸ್ ಪಡೆಯಬೇಕು. ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ ನೀಡಬೇಕು ಎಂದು ಸ್ಟೇಷನ್ ಮಾಸ್ಟರ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಾವು ದ್ರಾವಿಡ ಕನ್ನಡ ಚಳವಳಿ ಮುಖಂಡ ಅಭಿ ಒಕ್ಕಲಿಗ, ಕರವೇ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಮುಖಂಡರಾದ ಎಂ.ಬಿ ನಾಗಣ್ಣ, ಕರವೇ ಮುಖಂಡ ಮುದ್ದೇಗೌಡ, ಆಟೋ ಚಾಲಕರ ಸಂಘದ ರಾಜು ಸೇರಿದಂತೆ ಹಲವರಿದ್ದರು.