ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಕಲ್ಲು, ಮಣ್ಣು ಮಿಶ್ರಿತ ಪಡಿತರ ವಿತರಿಸುತ್ತಿದೆ ಎಂದು ಆರೋಪಿಸಿ ತಾಲೂಕಿನ ಬೊಮ್ಮನಾಯಕನಹಳ್ಳಿಯ ಪಡಿತರದಾರರು ಗುರುವಾರ ಪ್ರತಿಭಟನೆ ನಡೆಸಿದರು.ತಾಲೂಕಿನ ಸುಖಧರೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ 5ಕ್ಕೂ ಹೆಚ್ಚು ಗ್ರಾಮಗಳಿಗೆ ಈ ತಿಂಗಳ ಪಡಿತರ ವಿತರಣೆಯಲ್ಲಿ ಅಕ್ಕಿ ಜತೆಗೆ ರಾಗಿ ವಿತರಿಸಲಾಗಿದೆ. ಆದರೆ, ರಾಗಿ ಸಂಪೂರ್ಣ ಕಲ್ಲು, ಮಣ್ಣಿನಿಂದ ಕೂಡಿದೆ ಎಂದು ಸಾಮೂಹಿಕವಾಗಿ ರಾಗಿಯನ್ನು ತಿಪ್ಪೆಗೆ ಸುರಿದು ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ತಿಂಗಳಲ್ಲಿ ವಿತರಿಸುವ ರಾಗಿ ತಿನ್ನಲು ಯೋಗ್ಯವಿಲ್ಲ. ಈ ವಿಚಾರವಾಗಿ ನ್ಯಾಯಬೆಲೆ ಅಂಗಡಿ ಮಾಲೀಕನನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಧಿಕ್ಕಾರದ ಘೋಷಣೆ ಕೂಗಿದರು.ಈ ಬಗ್ಗೆ ತಾಲೂಕು ಮಟ್ಟದ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ಉಳಿದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಿರುವ ರಾಗಿಯು ಬಹಳ ಚೆನ್ನಾಗಿದೆ. ಆದರೆ, ಸುಖಧರೆ ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ಇಂತಹ ಕಳಪೆ ಗುಣಮಟ್ಟದ ರಾಗಿ ವಿತರಣೆಯಲ್ಲಿ ಏನೋ ವಂಚನೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಸುಖಧರೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಒಟ್ಟು 586 ಪಡಿತರದಾರರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕ ಪ್ರತಿ ತಿಂಗಳು ಕೂಡ ಕಳಪೆ ದರ್ಜೆಯ ರಾಗಿಯನ್ನು ವಿತರಣೆ ಮಾಡುತ್ತಿದ್ದಾರೆ ಎಂದು ದೂರಿದರು.ಈ ಸಂಬಂಧ ಸಾಕಷ್ಟು ದೂರುಗಳನ್ನು ಅಧಿಕಾರಿಗಳಿಗೆ ನೀಡಿದ್ದರೂ ಆಹಾರ ನಿರೀಕ್ಷಕರು ಯಾವುದೇ ಕ್ರಮ ವಹಿಸುತ್ತಿಲ್ಲ. ಇದರಲ್ಲಿ ಆಹಾರ ಇಲಾಖೆಯು ಕೂಡ ಶಾಮೀಲಾಗಿದೆ ಎಂದು ಪಡಿತರದಾರರು ಆರೋಪಿಸಿದರು.
ಕೂಡಲೇ ಆಹಾರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಗ್ರಾಮದ ಹಲವು ಮಹಿಳೆಯರು ಭಾಗವಹಿಸಿದ್ದರು.