ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ನಾಡಿನ ಪ್ರಮುಖ ಧಾರ್ಮಿಕ ಕೇಂದ್ರ ಧರ್ಮಸ್ಥಳಕ್ಕೆ ಕಳಂಕ ತರಲು ಹುನ್ನಾರ ನಡೆಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ವಿವಿಧ ಮಠಾಧೀಶರು, ಭಕ್ತರು ಮತ್ತು ವಿವಿಧ ಸಂಘ-ಸಂಸ್ಥೆಯವರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.ಅಡವಿಸಿದ್ದೇಶ್ವರ ಮಠದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಕೋರ್ಟ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, ಧಾರ್ಮಿಕ ಕ್ಷೇತ್ರದ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೇ ಸಹಸ್ರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕೆಲಕಾಲ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮೇಲೆ ಆಧಾರರಹಿತ ಹಾಗೂ ದುರುದ್ದೇಶದಿಂದ ಆರೋಪ ಮಾಡುತ್ತಿರುವ ವ್ಯಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಈ ಕುರಿತು ತಾಲೂಕು ಆಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಿಂದ ನಿತ್ಯ ಸಹಸ್ರಾರು ಭಕ್ತರು ಮಂಜುನಾಥ ಸ್ವಾಮಿ ದರ್ಶನ ಪಡೆಯಲು ಆಗಮಿಸುತ್ತಾರೆ. ಆದರೆ, ಕೆಲವರು ದುರುದ್ದೇಶದಿಂದ ಈ ಧಾರ್ಮಿಕ ಕ್ಷೇತ್ರಕ್ಕೆ ಅಪಕೀರ್ತಿ ತರಲು ಷಡ್ಯಂತ್ರ ರೂಪಿಸಿದ್ದಾರೆ. ಈ ಪ್ರಮುಖ ಧಾರ್ಮಿಕ ಕೇಂದ್ರದ ಪಾವಿತ್ರ್ಯತೆಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷರೂ ಆದ ಪುರಸಭೆ ಹಿರಿಯ ಸದಸ್ಯ ಮಹಾವೀರ ನಿಲಜಗಿ ಮಾತನಾಡಿ, ಅನಾಮಿಕ ವ್ಯಕ್ತಿಯ ದೂರು ಆಧರಿಸಿ ಧರ್ಮಸ್ಥಳದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಸಂಚು ರೂಪಿಸುತ್ತಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಯುವ ಮುಖಂಡ ಪೃಥ್ವಿ ಕತ್ತಿ ಮಾತನಾಡಿ, ಕೆಲ ಕುತಂತ್ರಿಗಳು ಧರ್ಮಸ್ಥಳದ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುವ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಎಸ್‌ಐಟಿ ಅಧಿಕಾರಿಗಳೇ ಪ್ರಕರಣದ ಕುರಿತು ಗೊಂದಲದಲ್ಲಿದ್ದಾರೆ. ಸರ್ಕಾರ ತಕ್ಷಣವೇ ಎಸ್‌ಐಟಿ ತನಿಖೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹತ್ತರಗಿ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಕ್ಯಾರಗುಡ್ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ, ಜೈನ ಸಮಾಜದ ತಾಲೂಕು ಅಧ್ಯಕ್ಷ ಬಾಹುಬಲಿ ನಾಗನೂರಿ, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ನ್ಯಾಯವಾದಿ ರಾಜು ಚೌಗಲಾ, ಮುಖಂಡರಾದ ಸತ್ಯಪ್ಪಾ ನಾಯಿಕ, ಎ.ಕೆ.ಪಾಟೀಲ, ಗುರು ಕುಲಕರ್ಣಿ, ಸಂಜಯ ನಿಲಜಗಿ, ಬಾಹುಬಲಿ ಸೊಲ್ಲಾಪುರೆ, ಸಂಜು ಕಂಠಿ, ಸುನೀಲ ಪರ್ವತರಾವ್, ರಾಜು ಖೆಮಲಾಪುರೆ, ಪ್ರಜ್ವಲ ನಿಲಜಗಿ, ಸಂಜು ಬಸ್ತವಾಡ, ರೋಹಣ ನೇಸರಗಿ, ಶಿವರಾಜ ನಾಯಿಕ, ರಮೇಶ ಹುಂಜಿ, ಕೆಂಪಣ್ಣಾ ಶಿರಹಟ್ಟಿ, ಎನ್.ಬಿ.ತೇರದಾಳ, ಅಕ್ಕಪ್ಪ ಖತಗಲ್ಲಿ, ಸಂಜು ಅಡಿಕೆ, ರಾಮಣ್ಣಾ ಗೋಟೂರೆ, ರಾಮಗೌಡ ಹೆಬ್ಬಾಳ, ಪುಟ್ಟು ಚೌಗಲಾ, ಸಂಜು ಮಗದುಮ್ಮ, ವಿದ್ಯಾದರ ಹರಾರಿ ಮತ್ತಿತರರು ಉಪಸ್ಥಿತರಿದ್ದರು.