ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ

| Published : Sep 19 2024, 01:51 AM IST

ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆ ಹೊಳೆಆಲೂರಿನ ಶ್ರೀಕಲ್ಲೇಶ್ವರ ವಿದ್ಯಾ ಪ್ರಸಾರಕ ಸಮಿತಿಗೆ ಸೇರಿದ್ದಾಗಿದೆ. ಅಡಳಿತ ಮಂಡಳಿಗೆ ಶಾಲೆಯಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡುವುದು, ಅದಲು, ಬದಲು ಮಾಡುವುದು ಶಿಕ್ಷಣ ಇಲಾಖೆ ಗಮನಕ್ಕೆ ತರದೇ ನಿರ್ಧಾರ ಕೈಗೊಳ್ಳಲು ಬರುವದಿಲ್ಲ

ರೋಣ: ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದ ಇಬ್ಬರು ಶಿಕ್ಷಕರನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಹೊಳೆಆಲೂರ ಶ್ರೀಕಲ್ಲೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಆಡಳಿತ ಮಂಡಳಿಯ ಕ್ರಮ ಖಂಡಿಸಿ ತಾಲೂಕಿನ ಹುಲ್ಲೂರ ಗ್ರಾಮದ ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರೌಢ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿದೆ.

ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ 2 ಶಾಲೆ ಹಾಗೂ ಹುಲ್ಲೂರ ಗ್ರಾಮದಲ್ಲಿ ಒಂದು ಶಾಲೆ ಹೊಂದಿದ ಶ್ರೀಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿ ಹೊಳೆಆಲೂರ ಆಡಳಿತ ಮಂಡಳಿಯ ಅಧ್ಯಕ್ಷರು, ಹುಲ್ಲೂರ ಗ್ರಾಮದಲ್ಲಿ ನಪ್ರೌಢ ಶಾಲೆಯ ಕನ್ನಡ ಮತ್ತು ಸಮಾಜ ವಿಜ್ಞಾನದ ಇಬ್ಬರು ಶಿಕ್ಷಕರನ್ನು ಹೊಳೆಆಲೂರನ ಶ್ರೀಕಲ್ಮೇಶ್ವರ ಪ್ರೌಢ ಶಾಲೆಗೆ ಹಾಗೂ ಹೊಳೆಆಲೂರ ಪ್ರೌಢ ಶಾಲೆಯಲ್ಲಿನ ಇಬ್ಬರು ಶಿಕ್ಷಕರನ್ನು ಹುಲ್ಲೂರ ಶಾಲೆಗೆ ಅದಲು ಬದಲು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕ್ರಮ ಖಂಡಿಸಿ ಹುಲ್ಲೂರ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ಕುಳಿತು ಹೊಳೆಆಲೂರ ಶ್ರೀ ಕಲ್ಮೇಶ್ವರ ಆಡಳಿತ ಮಂಡಳಿ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಪಿ.ಎಸ್. ಐ ಪ್ರಕಾಶ ಬಣಕಾರ ತೆರಳಿ ಪ್ರತಿಭಟನಾ ನಿರತರ ಮನವೊಲಿಸಲು ಪ್ರಯತ್ನಿಸಿದರು.

ಸುದ್ದಿ ತಿಳಿಯುತ್ತಿದಂತೆ ಬಿಇಒ ರುದ್ರಪ್ಪ ಹುರಳಿ ಹುಲ್ಲೂರಗೆ ತೆರಳಿ ಗ್ರಾಮಸ್ಥರ, ಪಾಲಕರ ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಈ ವೇಳೆ ಬಿಇಒ ರುದ್ರಪ್ಪ ಹುರಳಿ ಮಾತನಾಡಿ, ಈ ಶಾಲೆ ಹೊಳೆಆಲೂರಿನ ಶ್ರೀಕಲ್ಲೇಶ್ವರ ವಿದ್ಯಾ ಪ್ರಸಾರಕ ಸಮಿತಿಗೆ ಸೇರಿದ್ದಾಗಿದೆ. ಅಡಳಿತ ಮಂಡಳಿಗೆ ಶಾಲೆಯಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡುವುದು, ಅದಲು, ಬದಲು ಮಾಡುವುದು ಶಿಕ್ಷಣ ಇಲಾಖೆ ಗಮನಕ್ಕೆ ತರದೇ ನಿರ್ಧಾರ ಕೈಗೊಳ್ಳಲು ಬರುವದಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಗಮನಕ್ಕೆ ತರಬೇಕು. ಹುಲ್ಲೂರ ಇಬ್ಬರು ಶಿಕ್ಷಕರನ್ನು ಹೊಳೆಆಲೂರಗೆ, ಹೊಳೆಆಲೂರಿನ ಇಬ್ಬರು ಶಿಕ್ಷಕರನ್ನು ಹುಲ್ಲೂರಗೆ ವರ್ಗ ಮಾಡಿದರ ಬಗ್ಗೆ ನಮ್ಮ‌ಇಲಾಖೆ ಗಮನಕ್ಕೆ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ. ಕೂಡಲೇ ಈ ಕುರಿತು ಸಮಿತಿಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುವದು. ಯಾವುದೇ ಕಾರಣಕ್ಕೂ ಶಿಕ್ಷಕರನ್ನು ಆ ಶಾಲೆಯಿಂದ, ಈ ಶಾಲೆಗೆ ಅದಲು ಬದಲು ಮಾಡದಂತೆ, ಈ ಹಿಂದೆ ಇದ್ದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಗುವದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು, ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಹುಲ್ಲೂರ ಗ್ರಾಮಸ್ಥರು, ವಿದ್ಯಾರ್ಥಿಗಳು ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.