ಸಾರಾಂಶ
ಅ.9 ರಂದು ಮುತ್ತಗಿ ಗ್ರಾಮದಲ್ಲಿ ರಾತ್ರೋರಾತ್ರಿಯಲ್ಲಿ ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಕೈಯನ್ನು ತುಂಡು ಮಾಡಿದ್ದಾರೆ. ಅಲ್ಲದೆ ಶರಣರ ಮುಖಕ್ಕೆ ಮಸಿ ಬಳಿದ ಕೆಲವು ಕಿಡಿಗೇಡಿಗಳು ಸಮಾಜದ ಗುರುಗಳಿಗೆ ಅಪಮಾನ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ಮುತ್ತಗಿ ಗ್ರಾಮದಲ್ಲಿ ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವುದನ್ನು ಖಂಡಿಸಿ ತಾಲೂಕು ಗಂಗಾಮತಸ್ಥರ ಸಮಾಜದ ಮುಖಂಡರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಕುವೆಂಪು ವೃತ್ತದಲ್ಲಿ ಸೇರಿ ಮೈಸೂರು- ಬೆಂಗಳೂರು ಹೆದ್ದಾರಿ ತಡೆ ಮಾಡಿದ ಪ್ರತಿಭಟನಾಕಾರರು, ಪಟ್ಟಣದ ಮುಖ್ಯ ಬೀದಿಯಲ್ಲಿ ಕಿಡಿಗೇಡಿಗಳ ವಿರುದ್ದ ಘೋಷಣೆ ಕೂಗಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟಿಸಿದರು.
ತಾಲೂಕು ಕಚೇರಿ ಎದುರು ಗಂಗಾಂತಸ್ಥರ ಸಮಾಜದ ತಾಲೂಕು ಪ್ರಧಾನ ಕಾಯದರ್ಶಿ ಹಾಲಪ್ಪ ನೇತೃತ್ವದಲ್ಲಿ ಸಮಾಜದ ಮುಖಂಡರು ಸೇರಿ ಅಂಬಿಗರ ಚೌಡಯ್ಯರ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅ.9 ರಂದು ಮುತ್ತಗಿ ಗ್ರಾಮದಲ್ಲಿ ರಾತ್ರೋರಾತ್ರಿಯಲ್ಲಿ ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಕೈಯನ್ನು ತುಂಡು ಮಾಡಿದ್ದಾರೆ. ಅಲ್ಲದೆ ಶರಣರ ಮುಖಕ್ಕೆ ಮಸಿ ಬಳಿದ ಕೆಲವು ಕಿಡಿಗೇಡಿಗಳು ಸಮಾಜದ ಗುರುಗಳಿಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಕೃತ್ಯವನ್ನು ನಮ್ಮ ಸಮಾಜವು ತೀವ್ರವಾಗಿ ಖಂಡಿಸುತ್ತದೆ. ಅಂಬಿಗರ ಚೌಡಯ್ಯ ಅವರು ಬಸವಣ್ಣನ ಸಮಕಾಲೀನರು. ಅವರು ಸಮಾಜಕ್ಕೆ ಹಲವು ಕೊಡುಗೆಗಳ ನೀಡಿದವರು. ಇಂತಹವರ ಪ್ರತಿಮೆ ಭಗ್ನಗೊಳಿಸಿ ಹೀನಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಉಗ್ರ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಗಂಜಾಂ ಶಿವು, ಎಸ್.ಟಿ. ರಾಜು, ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್ ಕೆಆರೆಸ್, ವಕೀಲ ಬಾಲು, ಪ್ರಕಾಶ್ ದೊಡ್ಡ ಮಾದಯ್ಯ, ವಿ. ನಾರಾಯಣ, ಕಾಳಯ್ಯ, ಶಿವಕುಮಾರ್, ಸೋಮ, ಜಿ.ಎಲ್.ರವಿ, ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.