ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು, ರಾಜ್ಯದಲ್ಲಿ ಜಾರಿಗೊಳಿಸಬಾರದು ಎಂಬ ಒಕ್ಕೂರಲ ಒತ್ತಾಯಿಸಿ ಇಲ್ಲಿನ ಅಂಜುಮನ್ ಕಮಿಟಿ ಸದಸ್ಯರು ಹಾಗೂ ಅಹಿಂದ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಭಾನುವಾರ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೇ, ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಸಿಲ್ದಾರ್ ಪ್ರಕಾಶ ಸಿಂದಗಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರವು ವಕ್ಪ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು ಅಸಾಂವಿಧಾನಿಕ ನಡೆ, ಇದನ್ನು ಮರು ಪರಿಶೀಲಿಸಬೇಕು .ಮುಸ್ಲಿಂ ಕಾನೂನಿನಂತೆ ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಪಿಸಲಾದ ಆಸ್ತಿ. ವಕ್ಫ್ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ. ಬಿಜೆಪಿ ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಸಮುದಾಯದ ಹಿತ ಕಾಪಾಡಬೇಕು ಹಾಗೂ ರಾಜ್ಯ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೊಳಿಸಬಾರದು ಎಂದು ಹೇಳಿದರು.ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಮೈಹಿಬೂಬ ಹುಂಡೆಕಾರ, ಉಪಾಧ್ಯಕ್ಷ ಮಹಮ್ಮದ್ ರಫೀಕ್ ಪಾನಫರೋಶ, ಮುಖಂಡರಾದ ಅಬ್ದುಲ್ ಸತ್ತಾರ, ಬಸೀರ ಅಹ್ಮದ್ ಬೇಪಾರಿ, ದಸ್ತಗಿರ ಮುಲ್ಲಾ, ರಿಯಾಜ್ ತಾಂಬೋಳಿ, ಜಬ್ಬಾರ ಮೋಮಿನ್, ಮುನ್ನಾ ಮಳಖೇಡ, ಪ್ರಕಾಶ ಗುಡಿಮನಿ, ಮೌಲಾನ ಅಹ್ಮದ್ ಅಲಿ, ರಾಜು ಮೇಟಗಾರ, ಹೈದರಸಾಬ್ ಮುಲ್ಲಾ, ಎ.ಡಿ.ಮುಲ್ಲಾ, ಶರಣು ಜಮಖಂಡಿ, ಇಕ್ಬಾಲ್ ಬಿಜಾಪುರ, ರಜಾಕ ಆಹೇರಿ, ಅಜೀಜ ಮರೋಳ, ತಿಪ್ಪಣ್ಣ ಮೇಲಿನಮನಿ ಸೇರಿ ಅಂಜುಮನ್ ಕಮಿಟಿಯ ಸದಸ್ಯರು, ಅಹಿಂದ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.