ಸಾರಾಂಶ
- ಮುಸ್ಲಿಮರ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯ, ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ,
ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರು, ಮಾ.21ಕೇಂದ್ರ ಸರ್ಕಾರ ವಕ್ಫ್ ಮಸೂದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಅಲ್ಪಸಂಖ್ಯಾತ ಅಭಿವೃದ್ಧಿ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಧರ್ಮಗುರುಗಳು ಶುಕ್ರವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತ ಅಭಿವೃದ್ಧಿ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಶಿಹಾನ್ ಪಾಷಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಾವು ಮರೆಯಬಾರದು. ನಾವು ಕಷ್ಟದಲ್ಲಿದ್ದರೂ ನಮ್ಮ ದೇಶದ ಘನತೆ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಿದ್ದೇವೆ. ಪ್ರಧಾನಮಂತ್ರಿ ದೇಶದ ಸಂಪತ್ತನ್ನು ಮಾರುತ್ತಿ ದ್ದಾರೆ. ಈಗ ಮುಸಲ್ಮಾನರ ಸಂಪತ್ತಿನ ಮೇಲೆ ಕಣ್ಣು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ವಕ್ಫ್ ಆಸ್ತಿ ಮತ್ತು ದೇಶದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುವ ಹಲವು ತಿದ್ದುಪಡಿ ಗಳಿವೆ. ಇದಲ್ಲದ ವಕ್ಫ್ ಆಸ್ತಿಯಲ್ಲಿ ಸರ್ಕಾರಿ ಒಳ ನುಸುಳುವಿಕೆ ಹಾಗೂ ಮಧ್ಯಸ್ಥಿಕೆಗೆ ದಾರಿ ಮಾಡಿಕೊಡಲಾಗಿದೆ. ಈ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ತಪ್ಪಾಗಿ ಮಂಡಿಸಿತು. ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದಾಗ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು. ಆದರೆ, ಈ ಸಮಿತಿ ಸರ್ಕಾರದ ನೀತಿ ಪ್ರಕಾರ ಏಕಪಕ್ಷೀಯವಾಗಿ ಕಾರ್ಯ ನಿರ್ವಹಿಸಿತು ಮತ್ತು ಈಗ ಮತ್ತೆ ಬಿಜೆಪಿ ಸರ್ಕಾರ ಅದನ್ನು ಸಂಸತ್ತಿನಲ್ಲಿ ಮಂಡಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಪ್ರತಿಯೊಬ್ಬ ಮುಸ್ಲಿಮ್ ಮತ್ತು ಜಾತ್ಯತೀತ ಜನರು ಈ ಮಸೂದೆ ವಿರೋಧಿಸುತ್ತಾರೆ. ಎಲ್ಲ ರೀತಿಯಲ್ಲಿ ಈ ಮಸೂದೆಯನ್ನು ವಿರೋಧಿಸುವುದನ್ನು ಮುಂದುವರಿಸುತ್ತಾರೆ ಎಂಬ ಸಂದೇಶವನ್ನು ಸರ್ಕಾರಿ ಕಾರಿಡಾರ್‌ಗಳಿಗೆ ತಲುಪಿಸು ವುದು ಪ್ರತಿಭಟನೆ ಉದ್ದೇಶವಾಗಿದೆ ಎಂದರು.ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ವಕ್ಫ್ ಮಸೂದೆ ತಿದ್ದುಪಡಿಗೆ ಯಾವುದೇ ಕಾರಣಕ್ಕೂ ಮುಸ್ಲಿಮರು ಬಿಡುವುದಿಲ್ಲ. ದೇಶದಲ್ಲಿ ನಿರಂತರವಾಗಿ ಮುಸಲ್ಮಾನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಒಮ್ಮೆ ಹಲಾಲ್, ಹಿಜಾಬ್, ಧ್ವನಿವರ್ಧಕ, ಗೋ ಹತ್ಯೆ ನಿಷೇಧ, ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಮುಸಲ್ಮಾನರಿಗೆ ಅವಕಾಶವಿಲ್ಲ ಎಂಬ ಹೇಳಿಕೆ ನೀಡಿ ಬಿಜೆಪಿಯವರು ದೇಶದಲ್ಲಿ ಅಶಾಂತಿ ಸೃಷ್ಠಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಷಡ್ಯಂತ್ರಕ್ಕೆ ದೇಶದ ಜನ ಗಮನ ಕೊಡ ಬಾರದು. ಲಾಕ್ ಡೌನ್ ಸಂದರ್ಭದಲ್ಲಿ ತನ್ನ ತಂದೆ ತಾಯಿ ಶವವನ್ನು ಬಿಟ್ಟುಹೋದ ಕೆಲ ಅನ್ಯ ಧರ್ಮೀಯರ ಶವವನ್ನು ಜಾತಿ ಭೇದಭಾವವಿಲ್ಲದೆ ಅವರ ಶವ ಸಂಸ್ಕಾರವನ್ನು ಮುಸ್ಲಿಮ್ ಸಮಾಜದವರು ನೆರವೇರಿಸಿದ್ದಾರೆ. ಹಿಂದು ಮುಸಲ್ಮಾನರು ಸೌಹಾರ್ದತೆಯಲ್ಲಿ ಬದುಕುತ್ತಿದ್ದ ಸಂದರ್ಭದಲ್ಲಿ ಈ ಸಂಘ ಪರಿವಾರದವರು ಜಾತಿ ವಿಷ ಬೆರೆಸುತ್ತಾ ನಮ್ಮನ್ನು ದೂರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮುಸ್ಲಿಮ್ ಮುಖಂಡರಾದ ಅಮ್ಜದ್, ಸಿ.ಎನ್.ಅಕ್ಮಲ್, ಮುನಿರ್ ಅಹಮದ್, ಕೆ.ಮೊಹಮ್ಮದ್, ಜಾಮಿಯಾ ಅಧ್ಯಕ್ಷ ಮುದಸಿರ್ ಪಾಷಾ, ಅಬ್ದುಲ್ ರೆಹಮಾನ್ ಮತ್ತಿತರರಿದ್ದರು. 21 ಕೆಸಿಕೆಎಂ 3ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಮ್ ಮುಖಂಡರು ವಕ್ಫ್ ಮಸೂದೆ ತಿದ್ದುಪಡಿ ತರುವುದನ್ನು ವಿರೋಧಿಸಿದರು. ನಯಾಜ್ ಅಹಮದ್, ಶಿಹಾನ್ ಪಾಷಾ, ಸಿ.ಎನ್.ಅಕ್ಮಲ್, ಮುನೀರ್ ಅಹಮದ್ ಹಾಗೂ ಮುಸ್ಲಿಂ ಸಮುದಾಯದವರು ಇದ್ದರು.