ಹಾನಗಲ್ಲ ತಾಲೂಕಿನ ಕರಗುದರಿ ಬಳಿ ಟೋಲ್ ವಿರೋಧಿಸಿ ಪ್ರತಿಭಟನೆ

| Published : Mar 14 2025, 12:32 AM IST

ಸಾರಾಂಶ

ಹುಬ್ಬಳ್ಳಿ ಮಾರ್ಗದಲ್ಲಿ ತಡಸದಿಂದ ನಿಟಗಿನಕೊಪ್ಪದ ಬಳಿ 43 ಕಿಮೀ ಅಂತರವಿದೆ. ಆದರೆ ಅಲ್ಲಿ ಬಿಟ್ಟು ಹಾನಗಲ್ಲ ಸಮೀಪದಲ್ಲಿ ಟೋಲ್ ಆರಂಭಿಸಿರುವುದು ಕಾನೂನುಬಾಹಿರ.

ಹಾನಗಲ್ಲ: ಸಮೀಪದ ಕರಗುದರಿ ಬಳಿ ರಸ್ತೆಗೆ ಟೋಲ್ ಆರಂಭಿಸುವುದನ್ನು ವಿರೋಧಿಸಿ ಸಾರ್ವಜನಿಕರು ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ ಮಾರ್ಗದಲ್ಲಿ ತಡಸದಿಂದ ನಿಟಗಿನಕೊಪ್ಪದ ಬಳಿ 43 ಕಿಮೀ ಅಂತರವಿದೆ. ಆದರೆ ಅಲ್ಲಿ ಬಿಟ್ಟು ಹಾನಗಲ್ಲ ಸಮೀಪದಲ್ಲಿ ಟೋಲ್ ಆರಂಭಿಸಿರುವುದು ಕಾನೂನುಬಾಹಿರ. 2017ರಲ್ಲೇ ಮುಗಿದ ರಸ್ತೆಗೆ ಈಗ ಟೋಲ್ ಆಕರಣೆ ಮಾಡುವುದು ಸರಿಯಲ್ಲ. ಈಗಾಗಲೇ ತಡಸ- ಶಿವಮೊಗ್ಗ ರಸ್ತೆ ಹಾಳಾಗಿದೆ. ಹಾಳಾದ ರಸ್ತೆಗೆ ಟೋಲ್ ವಸೂಲಿ ಮಾಡುವ ಕ್ರಮ ತೀರ ಅವೈಜ್ಞಾನಿಕ. ಲೋಕೋಪಯೋಗಿ ಇಲಾಖೆ ಈ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿದೆ. ಸರಿಯಾದ ಮಾಹಿತಿ ಇಲ್ಲದೆ ತಹಸೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ಇಲ್ಲದೆ ಟೋಲ್ ವಸೂಲಿಗೆ ಸಿದ್ಧತೆ ನಡೆದಿರುವುದು ಸರಿಯಲ್ಲ. ಎಂತಹ ಹೋರಾಟಕ್ಕೂ ಸಿದ್ಧ. ಈ ಜಾಗದಲ್ಲಿ ಟೋಲ್ ಮಾಡಲು ಬಿಡುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ಎಸ್. ರೇಣುಕಾ ಮಾತನಾಡಿ, ಟೋಲ್ ವಿಷಯಕ್ಕೆ ಹಲವು ಬಾರಿ ವಿರೋಧಗಳು, ಪ್ರತಿಭಟನೆ ನಡೆದಿವೆ. ಮತ್ತೊಮ್ಮೆ ಪರಿಶೀಲಿಸಿ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳ ಜತೆ ಮಾತನಾಡುವೆ. ಪ್ರತಿಭಟನೆಯಂತಹ ಕ್ರಮಗಳು ಬೇಡ. ಒಂದೆರಡು ದಿನ ಕಾಲವಕಾಶ ನೀಡಿ. ಕಾನೂನುಬಾಹಿರವಾಗಿದ್ದರೆ ಸ್ಥಳ ಬದಲಾಯಿಸಲು ಅವಕಾಶವಾಗುತ್ತದೆ ಎಂದು ಮನವಿ ಮಾಡಿದರು.

ಗುತ್ತಿಗೆದಾರ ಜ್ಯೋತಿಪ್ರಕಾಶ ಮಾತನಾಡಿ, 2017ರಲ್ಲೇ ರಸ್ತೆ ಕಾಮಗಾರಿ ಮುಗಿದಿದೆ. ಆಗಲೇ ಟೋಲ್ ಆಕರಣೆ ನಡೆಯಬೇಕಿತ್ತು. ಆದರೆ 5 ಬಾರಿ ಟೆಂಡರ್ ಕರೆದರೂ ಈ ಟೋಲ್ ಆರಂಭವಾಗಲಿಲ್ಲ. ಈಗ 2024ರ ಜುಲೈನಲ್ಲಿ ಮರು ಟೆಂಡರ್ ಆಗಿದೆ. ಅದರಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಶೇ. 80ರಷ್ಟು ಟೋಲ್ ಕಾಮಗಾರಿ ಮುಗಿದಿದೆ. ಮೊದಲನೇ ವರ್ಷಕ್ಕೆ ₹2.15 ಕೋಟಿ, ಎರಡನೇ ವರ್ಷಕ್ಕೆ ₹2.36 ಕೋಟಿ, ಮೂರನೇ ವರ್ಷಕ್ಕೆ ₹2.60 ಕೋಟಿಗೆ ಟೋಲ್ ಟೆಂಡರ್ ಆಗಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ ಕಾಮಗಾರಿಯಾದ 28 ರಸ್ತೆಗಳಿಗೆ ಟೋಲ್ ಬಹುಹಿಂದೆಯೇ ಆರಂಭವಾಗಿವೆ. ತಾಂತ್ರಿಕ ಕಾರಣಕ್ಕೆ ಇದು ಮಾತ್ರ ಉಳಿದಿದೆ ಎಂದು ವಿವರಿಸಿದರು. ಮೇಲಧಿಕಾರಿಗಳ ಸೂಚನೆಯಂತೆಯೇ ಈ ಟೋಲ್ ಆರಂಭಿಸುತ್ತಿದ್ದೇವೆ ಎಂದರು.

ಒಂದು ಹಂತದಲ್ಲಿ ಸಾರ್ವಜನಿಕರು- ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪಿಎಸ್‌ಐ ಸಂಪತ್ತ ಆನಿಕಿವಿ ಅವರು, ಅನಗತ್ಯ ಗೊಂದಲಕ್ಕೆ ಅವಕಾಶ ಬೇಡ. ತಹಸೀಲ್ದಾರರ ಸಮ್ಮುಖದಲ್ಲಿ ಅವರ ಆದೇಶದಂತೆ ನಡೆಯೋಣ. ಸಭೆಯಲ್ಲಿ ವಾಸ್ತವ ಚರ್ಚಿಸಿ, ಅದರಂತೆ ನಡೆಯೋಣ ಎಂದು ಮನವಿ ಮಾಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ, ಬಿಜೆಪಿ ಮುಖಂಡರಾದ ಸೋಮಶೇಖರ ಕೋತಂಬರಿ, ವಿನಾಯಕ ಕುರುಬರ, ಶಿವಲಿಂಗಪ್ಪ ತಲ್ಲೂರ, ವಿನಾಯಕ ಕುರುಬರ, ಮಾಲತೇಶ ಸೊಪ್ಪಿನ, ರಾಮು ಯಳ್ಳೂರ, ಅಣ್ಣಪ್ಪ ಚಾಕಾಪುರ, ಅಡಿವೆಪ್ಪ ಆಲದಕಟ್ಟಿ, ಮೂಕಪ್ಪ ಪಡೆಪ್ಪನವರ, ಉಮೇಶ ಮುದಿಗೌಡರ, ಪ್ರೇಮಾ ಮುದಿಗೌಡರ, ದುರ್ಗಪ್ಪ ಮಕರವಳ್ಳಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಪಾಲ್ಗೊಂಡವರು ಒಕ್ಕೊರಲಿನಿಂದ ಹಾನಗಲ್ಲ ಬಳಿ ಟೋಲ್ ಆರಂಭಕ್ಕೆ ಬಿಡುವುದಿಲ್ಲ ಎಂದು ಹೇಳಿ, ಸಭೆಯ ಆನಂತರ ತಹಸೀಲ್ದಾರ್‌ ಕಚೇರಿ ಪ್ರವೇಶ ದ್ವಾರದ ಬಳಿ ಘೋಷಣೆ ಕೂಗಿದರು.