ಸಾರಾಂಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಸಂಸತ್‌ನಲ್ಲಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ತಿಪಟೂರಿನಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವ ಅಮಿತ್ ಶಾ ವಿರುದ್ದ ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಸಪ್ತಶ್ರೀರವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಸಂಸತ್‌ನಲ್ಲಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ತಿಪಟೂರಿನಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವ ಅಮಿತ್ ಶಾ ವಿರುದ್ದ ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಸಪ್ತಶ್ರೀರವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಮುಖಂಡರುಗಳು ಮಾನವ ಸರಪಳಿ ರಚಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ದಿಕ್ಕಾರ ಕೂಗುತ್ತಾ ರಾಜಿನಾಮೆಗೆ ಒತ್ತಾಯಿಸಿದರು.ಈ ವೇಳೆ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್ ಗೌಡ ಮಾತನಾಡಿ, ಅಮಿತ್ ಶಾ ಗೃಹ ಖಾತೆ ನಿರ್ವಹಿಸಲು ಅನರ್ಹರು. ಆರ್.ಎಸ್.ಎಸ್. ಅಂತರಾಳದ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ಪ್ರಪಂಚದ ಜ್ಞಾನ ದೀಪವಾದ ಅಂಬೇಡ್ಕರ್‌ರವರು ವಿದ್ವಾತ್ ಸಹಿಸದ ಅಸಹನೆಯಿಂದ ಮಾತನಾಡಿದ್ದಾರೆ. ದೇಶದ ಬಹುಜನರಿಗೆ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಆದಿವಾಸಿಗಳಿಗೆ ಅಂಬೇಡ್ಕರ್ ದೇವರ ಸಮಾನರು. ನಮಗೆ ಆತ್ಮಗೌರವದಿಂದ ಭೂಮಿಯ ಮೇಲೆ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವಿವೇಕತನದಿಂದ ಮಾತನಾಡಿರುವ ಅಮಿತ್ ಶಾ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ದಸಂಸ ತಾಲೂಕು ಸಂಚಾಲಕ ಯಗಚಿಕಟ್ಟೆ ರಾಘವೇಂದ್ರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ದೇಶದ ಜ್ಞಾನ ಹಾಗೂ ಅಸ್ಮಿತೆಯ ಸಂಕೇತ. ಇಂತಹ ನಾಯಕರ ಬಗ್ಗೆ ಮಾತನಾಡಿರುವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ದೇಶದ ಕಾನೂನು ಪಾಲಿಸಬೇಕಾದ ವ್ಯಕ್ತಿಯೇ ಒಂದು ವರ್ಗದ ಓಲೈಕೆಗಾಗಿ ಉದ್ಧಟತನದಿಂದ ಮಾತನಾಡಿರುವುದು ಸರಿಯಲ್ಲ ಎಂದರು. ದಸಂಸ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಜಕ್ಕನಹಳ್ಳಿ ಮೋಹನ್ ಮಾತನಾಡಿ, ಸಂವಿಧಾನದಡಿಯಲ್ಲಿ ಕೆಲಸ ನಿರ್ವಹಿಸುವ ನರೇಂದ್ರ ಮೋದಿಯವರೇ ಅಮಿತ್ ಶಾನಂತಹ ಅವಿವೇಕಿಯನ್ನ ಸಂಪುಟದಿಂದ ಕೈಬಿಡಿ ಇಲ್ಲವಾದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದರು. ಪ್ರತಿಭಟನೆಯಲ್ಲಿ ಮುಖಂಡರಾದ ಕಂಚಾಘಟ್ಟ ಸುರೇಶ್, ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಅಧ್ಯಕ್ಷ ಶಿವಕುಮಾರ್, ಕೊರಚ ಮಹಾಸಭಾ ಅಧ್ಯಕ್ಷ ಸತೀಶ್, ಸಂಚಾಲಕಿ ನಂದಿನಿ, ಕವಿತಾ, ಭಾಗ್ಯ, ಜೈ ಭೀಮ್ ಛಲವಾದಿ ಸಂಘದ ಅಧ್ಯಕ್ಷ ಸ್ವಾಮಿ, ಮುಖಂಡರಾದ ಮಂಜುನಾಥ್, ಕೃಷ್ಣ, ರಮೇಶ್ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.