ಸಾರಾಂಶ
ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಕಾಯ್ದೆ-2025 ವಿರೋಧಿಸಿ ಅಂಜುಮನ್ ಎ-ಇಸ್ಲಾಂ ಸಂಸ್ಥೆ ನೇತೃತ್ವದಲ್ಲಿ ಮುಸ್ಲಿಮ ಬಾಂಧವರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಂಬೇಡ್ಕರ್ ಸರ್ಕಲ್‌ನಿಂದ ಪ್ರಾರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಆಗಮಿಸಿತು. ಮೆರವಣಿಗೆಯುದ್ದಕ್ಕೂ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಕೆಲಕಾಲ ಪ್ರತಿಭಟನಾ ಸಮಾವೇಶ ನಡೆಸಿದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ, ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿರೋಧಿಸುವ ಮೂಲಕ ಕರಾಳ ವಕ್ಫ್ ತಿದ್ದುಪಡಿ ವಿಧೇಯಕ ಎಂದು ಪ್ರತಿಭಟನಾಕಾರರು ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಅಂಜುಮನ್ ಇ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯಿದೆಯು ಸಂಪೂರ್ಣವಾಗಿ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿವೆ ಮತ್ತು ಸಮುದಾಯಗಳ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ಬಳಿಕ ತಹಸೀಲ್ದಾರ್ ಕಲಗೌಡ ಪಾಟೀಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ವಿಧೇಯಕ- 2025ಅನ್ನು ಅಂಗೀಕರಿಸುವ ವಿಷಯದಲ್ಲಿ ಎಲ್ಲ ಪ್ರಜಾಸತ್ತಾತ್ಮಕ ನಿಯಮಗಳು, ಪದ್ಧತಿಗಳು ಮತ್ತು ಕಾರ್ಯ ವಿಧಾನಗಳನ್ನು ಗಾಳಿಗೆ ತೂರಿದೆ ಎಂದು ಮನವಿಯಲ್ಲಿ ದೂರಲಾಗಿದೆ.ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮಾತನಾಡಿ, ತರಾತುರಿಯಲ್ಲಿ ವಿಧೇಯಕ ಅಂಗೀಕರಿಸಲಾಗಿದೆ. ಸರ್ಕಾರವು ಲೋಕಸಭೆಯಲ್ಲಿ ವಿಧೇಯಕವನ್ನು ಅಂಗೀಕರಿಸಲು ತನ್ನ ಬಹುಮತ ಚಲಾಯಿಸಿತು.ರಾಜ್ಯಸಭೆಯಲ್ಲಿ ತೀವ್ರ ವಿರೋಧದ ಹೊರತಾಗಿಯೂ ಅದನ್ನು ಅಂಗೀಕರಿಸಲಾಗಿದೆ. ಇದರೊಂದಿಗೆ ಪ್ರಜಾಪ್ರಭುತ್ವದ ಅಂತರ್ಗತ ಸ್ವರೂಪವನ್ನು ಸಂಪೂರ್ಣ ಹಾಳು ಮಾಡಿದ್ದು, ಸಮಾಜದಲ್ಲಿ ವಿಭಜಕ ಕಾರ್ಯಸೂಚಿ ಮತ್ತಷ್ಟು ಹೆಚ್ಚಿಸುವ ಸರ್ಕಾರದ ಕುತಂತ್ರವಾಗಿದೆ ಎಂಬುದನ್ನು ಸಾಬೀತುಪಡಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಆಸ್ತಿಗಳು ಮುಸ್ಲಿಮರು ತಮ್ಮ ಸಮಾಜದ ಪ್ರಯೋಜನಕ್ಕಾಗಿ ಮತ್ತು ಹಿಂದುಳಿದವರಿಗೆ ಸಹಾಯ ಮಾಡಲು ದೇವರ ಹೆಸರಿನಲ್ಲಿ ಅರ್ಪಿಸಿದ ವೈಯಕ್ತಿಕ ಆಸ್ತಿಗಳಾಗಿವೆ. ಅಂತಹ ಧಾರ್ಮಿಕ- ಸಾಮಾಜಿಕ ಸಂಸ್ಥೆಗಳು ರಾಜ್ಯದಿಂದ ಕನಿಷ್ಠ ಹಸ್ತಕ್ಷೇಪ ಖಾತ್ರಿ ಪಡಿಸುತ್ತವೆ. ಆದರೆ ಸರ್ಕಾರದ ಪ್ರಸ್ತಾವಿತ ತಿದ್ದುಪಡಿಗಳು ಸಂಸ್ಥೆಗಳ ಸ್ವಾಯತ್ತತೆ ಮತ್ತು ಕಾರ್ಯನಿರ್ವಹಣೆಗೆ ಬೆದರಿಕೆ ಒಡ್ಡುವಂತಿವೆ ಎಂದು ಕಳವಳ ವ್ಯಕ್ತಪಡಿಸಿತು.ಅಸಂವಿಧಾನಿಕವಾದ ಈ ಕಾನೂನು ಜಾರಿಗೆ ಬಾರದಂತೆ ತಡೆಯುವ ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇದ್ದು, ಸಂವಿಧಾನ ರಕ್ಷಕರಾಗಿ ಜವಾಬ್ದಾರಿ ಮತ್ತು ಬುದ್ಧಿವಂತಿಕೆ ಪ್ರದರ್ಶಿಸಿ ಕಾನೂನು ಜಾರಿಗೆ ತಡೆ ನೀಡಬೇಕೆಂದು ಆಗ್ರಹಿಸಲಾಗಿದೆ.
ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಅತ್ತಾರ, ಕಾರ್ಯದರ್ಶಿ ಬಶೀರ್ ಅಹಮದ್ ಹಳ್ಳೂರ, ಪದಾಧಿಕಾರಿಗಳಾದ ಹಯಾತ್ ಖೈರಾತಿ, ಮಹಮ್ಮದ್ ರಫಿ ಬಂಕಾಪುರ, ಮಹಮ್ಮದ್ ಇರ್ಷಾದ್ ಬಳ್ಳಾರಿ, ಹುಧಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಕಾರ್ಪೋರೇಟರ್ ಇಮ್ರಾನ್ ಯಲಿಗಾರ, ಯೂಸುಫ್ ಸವಣೂರು, ಅನ್ವರ್ ಮುಧೋಳ, ಬಾಬಾಜಾನ ಮುಧೋಳ, ಮಜರ್‌ಖಾನ್, ಅಶ್ರಫ್ ಅಲಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.