ಅನುಮತಿ ಇದ್ದರಷ್ಟೇ ಮಂಗಳೂರಲ್ಲಿ ವಕ್ಫ್‌ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಅವಕಾಶ: ಹೈಕೋರ್ಟ್

| N/A | Published : Apr 18 2025, 12:45 AM IST / Updated: Apr 18 2025, 10:26 AM IST

ಅನುಮತಿ ಇದ್ದರಷ್ಟೇ ಮಂಗಳೂರಲ್ಲಿ ವಕ್ಫ್‌ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಅವಕಾಶ: ಹೈಕೋರ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಏ.18ರಂದು ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಬರುವ ಪಡೀಲ್‌ನಿಂದ ಬಿ.ಸಿ.ರೋಡ್‌ವರೆಗೆ ಸಂಚಾರ ನಿರ್ಬಂಧಿಸಿ ಪೊಲೀಸ್‌ ಆಯುಕ್ತರು ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಫಿರಂಗಿಪೇಟೆಯ ಎ.ರಾಜೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆ  

 ಬೆಂಗಳೂರು : ವಿವಾದಿತ ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲು ಮುಸ್ಲಿಮರಿಗೆ ಅನುಮತಿಸುವ ಮುನ್ನ ಪ್ರಕರಣವು ಸುಪ್ರೀಂ ಕೋರ್ಟ್‌ ಪರಿಗಣನೆಯಲ್ಲಿ ಎಂಬುದನ್ನು ರಾಜ್ಯ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂಬುದಾಗಿ ಸೂಚಿಸಿರುವ ಹೈಕೋರ್ಟ್‌, ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದರೆ ಮಾತ್ರ ಪ್ರತಿಭಟನೆ ನಡೆಸಬಹುದು ಹೊರತು ಯಾವುದೇ ಕಾರಣಕ್ಕೂ ರಸ್ತೆ ನಿರ್ಬಂಧಿಸಿ ಪ್ರತಿಭಟಿಸುವಂತಿಲ್ಲ ಎಂದು ನಿರ್ದೇಶಿಸಿದೆ.

ಏ.18ರಂದು ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಬರುವ ಪಡೀಲ್‌ನಿಂದ ಬಿ.ಸಿ.ರೋಡ್‌ವರೆಗೆ ಸಂಚಾರ ನಿರ್ಬಂಧಿಸಿ ಪೊಲೀಸ್‌ ಆಯುಕ್ತರು ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಫಿರಂಗಿಪೇಟೆಯ ಎ.ರಾಜೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್‌. ರವಿಶಂಕರ್‌ ಹಾಜರಾಗಿ, ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ- 73ರಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಈ ರಸ್ತೆಯಲ್ಲೇ ನಿತ್ಯ ಅರ್ಜಿದಾರರು ಓಡಾಡುತ್ತಾರೆ. ಏ.18ರಂದು ಬೃಹತ್‌ ಸಂಖ್ಯೆಯಲ್ಲಿ ಜನ ಜಮಾಯಿಸುವುದರಿಂದ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಓಡಾಟ ನಿರ್ಬಂಧಿಸಲಾಗಿದೆ. ಈಗಲೂ ಸಹ ಸರ್ಕಾರ ಪ್ರತಿಭಟನೆಗೆ ಅನುಮತಿಸಿಲ್ಲ ಎಂದು ಹೇಳುತ್ತಿಲ್ಲ ಎಂದು ಆಕ್ಷೇಪಿಸಿದರು.

ಸರ್ಕಾರದ ಪರ ವಕೀಲರು, ಅದ್ಯಾರ್‌ನ ಶಾ ಗಾರ್ಡನ್‌ ಸಭಾಂಗಣದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು, ಮಧ್ಯಮ ಮತ್ತು ಬೃಹತ್‌ ಗಾತ್ರದ ವಾಹನಗಳಿಗೆ ಪರ್ಯಾಯ ರಸ್ತೆ ಬಳಕೆ ಮಾಡಲು ಮಂಗಳೂರು ಪೊಲೀಸ್‌ ಆಯುಕ್ತರು ಸೂಚಿಸಿದ್ದಾರೆ. ಆದರೂ ಈ ಎಲ್ಲ ವಿಚಾರಗಳನ್ನು ಪೊಲೀಸ್‌ ಆಯುಕ್ತರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಕ್ಫ್‌ ತಿದ್ದುಪಡಿ ಕಾಯ್ದೆ ಪ್ರಶ್ನಿಸಿರುವ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಯಾವ ಪ್ರತಿಭಟನೆಗೆ ಅನುಮತಿಸಿದ್ದೀರಿ? ಮುರ್ಷಿದಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಸುಪ್ರೀಂ ಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ. ಇಂತಹ ಸಂದರ್ಭದಲ್ಲಿ ಪ್ರತಿಭಟನೆಗೆ ಸರ್ಕಾರ ಅನುಮತಿಸಬಾರದಿತ್ತು ಎಂದು ಮೌಖಿಕವಾಗಿ ಹೇಳಿತು.

ನಂತರ ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದರೆ ಮಾತ್ರ ಪ್ರತಿಭಟನೆ ನಡೆಸಬಹುದಾಗಿದೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಬಂಧಿಸಿ ಪ್ರತಿಭಟಿಸುವಂತಿಲ್ಲ. ಅನುಮತಿ ನೀಡಿರುವ ನಿರ್ದಿಷ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.