ಶಿವರಾಂಪೇಟೆಯ ವಿನೋಬಾ ರಸ್ತೆಯ ಎಂಕೆ ಹಾಸ್ಟೆಲ್‌ಗೆ ಸೇರಿದ ಖಾಲಿ ಜಾಗ ವಕ್ಫ್‌ ಸೇರಿದ ಆಸ್ತಿ ಎಂದು ನೋಟಿಸ್ ಜಾರಿಗೊಳಿಸಿದ್ದು, ಮೇ 9ರ ಒಳಗೆ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಪೂರ್ವ ಪಶ್ಚಿಮ 54 ಅಡಿ, ಉತ್ತರ ದಕ್ಷಿಣ 100 ಅಡಿ ಸೇರಿದಂತೆ ಒಟ್ಟು 3,268 ಚದರ ಅಡಿ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ಎಂ.ಕೆ.ಹಾಸ್ಟೆಲ್ ವಿಳಾಸಕ್ಕೆ ನೋಟಿಸ್ ಅಂಟಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಶತಮಾನಗಳ ಇತಿಹಾಸ ಇರುವ ಎಂಕೆ ಹಾಸ್ಟೆಲ್ ಜಾಗಕ್ಕೆ ವಕ್ಫ್‌ ಮಂಡಳಿ ನೋಟಿಸ್ ನೀಡಿರುವುದನ್ನು ಖಂಡಿಸಿ ಮಾಜಿ ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟಿಸಿದರು.

ಶಿವರಾಂಪೇಟೆಯ ವಿನೋಬಾ ರಸ್ತೆಯ ಎಂಕೆ ಹಾಸ್ಟೆಲ್‌ಗೆ ಸೇರಿದ ಖಾಲಿ ಜಾಗ ವಕ್ಫ್‌ ಸೇರಿದ ಆಸ್ತಿ ಎಂದು ನೋಟಿಸ್ ಜಾರಿಗೊಳಿಸಿದ್ದು, ಮೇ 9ರ ಒಳಗೆ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಪೂರ್ವ ಪಶ್ಚಿಮ 54 ಅಡಿ, ಉತ್ತರ ದಕ್ಷಿಣ 100 ಅಡಿ ಸೇರಿದಂತೆ ಒಟ್ಟು 3,268 ಚದರ ಅಡಿ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ಎಂ.ಕೆ.ಹಾಸ್ಟೆಲ್ ವಿಳಾಸಕ್ಕೆ ನೋಟಿಸ್ ಅಂಟಿಸಲಾಗಿದೆ. ಇದನ್ನು ಖಂಡಿಸಿ ಹಾಸ್ಟೆಲ್ ಪರ ಹೋರಾಟಗಾರರು ಪ್ರತಿಭಟಿಸಿ ವಕ್ಫ್‌ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪಸಿಂಹ 109 ವರ್ಷಗಳ ಇತಿಹಾಸ ವಿರುವ ಎಂ.ಕೆ.ಹಾಸ್ಟೆಲ್ ಗೋಡೆ ಮೇಲೆ ಏಕಾಏಕಿ ವಕ್ಫ್‌ ಮಂಡಳಿ ನೋಟಿಸ್ ಅಂಟಿಸಿ, ನಮಗೆ ಸೇರಿದ್ದು ಎಂದು ಹೇಳಿದೆ. ಮೈಸೂರಿನಲ್ಲಿ ಮಹಾರಾಜರ ಹಿನ್ನೆಲೆ ಇದೆಯೇ ಹೊರತು ಹೈದರಾಲಿ, ಟಿಪ್ಪು ಸುಲ್ತಾನ್ ಇತಿಹಾಸವಿಲ್ಲ. 2013ರ ವಕ್ಫ್‌ ಕಾಯ್ದೆ ತಿದ್ದುಪಡಿಯಲ್ಲಿ ಖಾಸಗಿ ಜಮೀನು, ಸರ್ಕಾರಿ ಜಮೀನು ಅಥವಾ ಯಾರದ್ದೇ ಜಮೀನು ಆದರೂ ಕಬಳಿಸಲು ಅವಕಾಶ ನೀಡಲಾಗಿತ್ತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ತಿದ್ದುಪಡಿ ಮಾಡಲಾಗಿತ್ತು. ಅದಕ್ಕೇ ಈಗ ಪ್ರಧಾನಿ ಮೋದಿ ಹೊಸ ವಕ್ಫ್‌ ತಿದ್ದುಪಡಿ ಕಾನೂನು ತಂದಿದ್ದಾರೆ. ಖಾಸಗಿ ಆಸ್ತಿಯನ್ನು ಕಬಳಿಸಲು ವಕ್ಫ್‌ ಮಂಡಳಿ ಮುಂದಾಗಿದೆ. ಇದಕ್ಕೆ ಖಂಡಿತ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಗುಡುಗಿದರು.

ದೇವರಾಜು ಅರಸು ಉಳುವವನೇ ಭೂಮಿಯ ಒಡೆಯ ಎಂದು ಹೇಳಿದ್ದರು. ಅದು ಈಗ ಏಕೆ ಅನ್ವಯವಾಗುವುದಿಲ್ಲ?, ವಕ್ಫ್‌ನವರು ಹಾಸ್ಟೆಲ್ ಮಾಲೀಕ ಮನ್ನಾರ್ ಕೃಷ್ಣಶೆಟ್ಟಿ ಅವರ ಕುಟುಂಬಕ್ಕೆ ಸೇರಿದ್ದಾರಾ? ಸಿದ್ದರಾಮಯ್ಯ ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದಾರೆಯೇ? ಇದಕ್ಕೆಲ್ಲ ನಾವು ಅವಕಾಶ ಮಾಡಿಕೊಡುವುದಿಲ್ಲ. ಇದನ್ನು ಇಲ್ಲೇ ಹರಿದು ಬಿಸಾಕುತ್ತೇವೆ. ಜಿಲ್ಲಾಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಬಾರದು. ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಎಂಕೆ ಹಾಸ್ಟೆಲ್ ಮಾಲೀಕ ಸಿ.ವಿ.ರಾಮಚಂದ್ರ ಶೆಟ್ಟಿ, ನಮ್ಮ ಜಾಗದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಅವರ ಬಳಿ ಏನು ದಾಖಲೆಗಳಿವೆಯೋ ಅದನ್ನು ತೋರಿಸಲಿ. ನಾವು ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಇತ್ತೀಚೆಗೆ ವಕ್ಫ್‌ ಮಂಡಳಿ ಸಾರ್ವಜನಿಕ ಸ್ಥಳಗಳನ್ನು ಮತ್ತು ಖಾಸಗಿ ಆಸ್ತಿ ಕಬಳಿಸಲು ಪ್ರಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ವಕ್ಫ್‌ ಮಂಡಳಿಗೆ ಬಿಟ್ಟುಕೊಡುವುದಿಲ್ಲ. ಅದು ನಮ್ಮ ಆಸ್ತಿ ಎಂದು ಒಂದೇ ಒಂದು ದಾಖಲೆ ಇದ್ದರೆ ತೋರಿಸಲಿ. ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ, ಪ್ರಮೀಳಾ ಭರತ್, ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಹೋರಾಟಗಾರರಾದ ಮೈಕಾ.ಪ್ರೇಮ್ ಕುಮಾರ್, ತೇಜೇಶ್ ಲೋಕೇಶ್ ಗೌಡ ಸೇರಿದಂತೆ ಕನ್ನಡಪರ ಹೋರಾಟಗಾರರು, ರೈತ ಮುಖಂಡರು ಪಾಲ್ಗೊಂಡಿದ್ದರು.