ಸಾರಾಂಶ
ಎಂಡಿಎ ಅಧ್ಯಕ್ಷರೇ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) 50:50 ನಿವೇಶನ ಹಂಚಿಕೆಯಲ್ಲಿನ ಬಹುಕೋಟಿ ಹಗರಣದ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆಗ್ರಹಿಸಿ ಪಿಜಿ ಜನಸ್ಪಂದನ ಫೌಂಡೇಷನ್ ವತಿಯಿಂದ ನಗರದ ಡಿ. ದೇವರಾಜ ಅರಸು ರಸ್ತೆ- ನಾರಾಯಣಶಾಸ್ತ್ರಿ ರಸ್ತೆ ಜಂಕ್ಷನ್ ನಲ್ಲಿ ಗುರುವಾರ ಪ್ರತಿಭಟಿಸಿದರು.ಎಂಡಿಎ ಹಗರಣದ ಕುರಿತು ವಿವಿಧ ರಾಜಕೀಯ ಪಕ್ಷದ ಕೆಲವು ಮುಖಂಡರು ಮತ್ತು ಚುನಾಯಿತು ಜನಪ್ರತಿನಿಧಿಗಳು, ಕೆಲವು ಆರ್.ಟಿ.ಐ ಕಾರ್ಯಕರ್ತರು ವಿಭಿನ್ನ ಹೇಳಿಕೆ ನೀಡುತ್ತಾ, ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಂಡಿಎ ಅಧ್ಯಕ್ಷರೇ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಹಗರಣದ ತನಿಖೆಗೆ ಐಎಎಸ್ ಅಧಿಕಾರಿಗಳ ತಂಡ ನೇಮಿಸಿದ್ದು, ಜಿಲ್ಲಾಧಿಕಾರಿ, ಎಂಡಿಎ ಆಯುಕ್ತರನ್ನು ವರ್ಗಾಯಿಸಿರುವುದನ್ನು ನೋಡಿದರೆ ಹಗರಣ ನಡೆದಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ದೂರಿದ್ದಾರೆ.
ಎಂಡಿಎ ಹಗರಣದ ಕುರಿತು ನಗರಾಭಿವೃದ್ಧಿ ಸಚಿವರ ಹೇಳಿಕೆ ಶಾಸಕಾಂಗ, ಕಾರ್ಯಾಂಗ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದು ಸತ್ಯ ಎಂಬುದು ತಿಳಿಯುತ್ತದೆ. ಜನ ಪ್ರತಿನಿಧಿಗಳು ಮುಗಿಬಿದ್ದು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಹೀಗಾಗಿ, ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಪಿಜಿ ಜನಸ್ಪಂದನ ಫೌಂಡೇಷನ್ ಅಧ್ಯಕ್ಷರಾದ ನಗರ ಪಾಲಿಕೆ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎ. ರವಿ, ವಕೀಲ ಗೋಪಿನಾಥ್, ಮುಖಂಡರಾದ ಎನ್.ಆರ್. ರಾಮಪ್ರಸಾದ್, ಅನೋಜ್ ಸರಸ್ವತ್, ಗುರುಪ್ರಸಾದ್, ಆದಿತ್ಯ, ಗುರುರಾಜಶೆಟ್ಟಿ, ನಿತಿನ್, ಪ್ರಶಾಂತ್, ಸಂತೋಷ್, ಉಮೇಶ್ ಮೊದಲಾದವರು ಇದ್ದರು.