ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧ ಫೆ. ೯ರಂದು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಉತ್ತರ ಕನ್ನಡ ಉಳಿಸಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಜಿ. ಭಟ್ ಹೇಳಿದರು.

ಕುಮಟಾ: ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧ ಫೆ. ೯ರಂದು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಉತ್ತರ ಕನ್ನಡ ಉಳಿಸಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಜಿ. ಭಟ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿಶ್ವದ ಅತ್ಯಂತ ಪರಿಶುದ್ಧ ನದಿಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾದ ಅಘನಾಶಿನಿ ನದಿ ತಿರುವು ಯೋಜನೆಯಿಂದ ಈ ನದಿಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ಶಾಶ್ವತ ಸಂಕಷ್ಟ ಎದುರಿಸಬೇಕಾಗುತ್ತದೆ. ಕೃಷಿ ಹಾಗೂ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಸುಮಾರು ೬೦೦ ಎಕರೆ ಅರಣ್ಯ ಪ್ರದೇಶದಲ್ಲಿ ₹೨೫ ಸಾವಿರ ಕೋಟಿಯಷ್ಟು ಬೃಹತ್ ಮೊತ್ತದಲ್ಲಿ ನಡೆಯುವ ಈ ಯೋಜನೆಗಾಗಿ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ೧.೨೦ ಲಕ್ಷ ಮರ ಕಡಿತ, ೨೫ ಕಿಮೀನಷ್ಟು ಸುರಂಗ, ೧೯೧ ಕಿಮೀ ಪೈಪ್‌ಲೈನ್ ಇರಲಿದೆ ಎಂಬ ಮಾಹಿತಿ ಇದೆ. ಈಗಾಗಲೇ ರಸ್ತೆಗಾಗಿ ಹೆದ್ದಾರಿಯಂಚಿನ ಗುಡ್ಡ ಬಗೆದಿದ್ದಕ್ಕೆ ತಂಡ್ರಕುಳಿ, ಶಿರೂರು ಗುಡ್ಡಕುಸಿತದಂತಹ ತೀವ್ರ ಅಪಾಯಗಳನ್ನು ಕಂಡಿದ್ದೇವೆ. ಈ ಸಮಸ್ಯೆಗಳಿಗೆ ಪರಿಹಾರ ಉಪಾಯಗಳೂ ಇಲ್ಲ. ಇಂಥ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸುರಂಗದಂತಹ ಕಾಮಗಾರಿಗಳು ಉಂಟು ಮಾಡುವ ಶಾಶ್ವತ ಸಮಸ್ಯೆಗಳು ಜೀವಾಪಾಯದ ಕಂಟಕಗಳಾಗಿ ನೂರಾರು ವರ್ಷ ಕಾಡಲಿದೆ ಎಂದು ಹೇಳಿದರು.

ಮೊದಲೇ ನೀರಿಲ್ಲದ ನದಿಯನ್ನು ತಿರುವುಗೊಳಿಸಿ ಸಂಪೂರ್ಣವಾಗಿ ಬತ್ತಿಸಿದರೆ ನದಿ ತಟವರ್ತಿ ೨೦ ಕಿಮೀ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತಕ್ಕೂ ಕಾರಣವಾಗಲಿದೆ. ಕೃಷಿ, ಬೇಸಾಯ, ತೋಟಗಾರಿಕೆ, ಮೀನುಗಾರಿಕೆ ಮುಂತಾಗಿ ಲಕ್ಷಾಂತರ ಜನ ಅಘನಾಶಿನಿ ನದಿಯನ್ನು ನಂಬಿದ್ದು, ಅವರಿಗೆ ಅನ್ಯಾಯವಾಗಲಿದೆ. ವಿಶ್ವಮಟ್ಟದಲ್ಲಿ ರಾಮ್ಸಾರ್ ತಾಣವಾಗಿ ಗುರುತಿಸಲಾದ ಅಘನಾಶಿನಿ ಅಳಿವೆಯ ವಿಶಿಷ್ಟತೆ ಉಳಿಯಬೇಕಿದೆ. ಪಶ್ಚಿಮಘಟ್ಟ ಅರಣ್ಯದ ೩೨೫ಕ್ಕೂ ಹೆಚ್ಚು ಜೀವವೈವಿಧ್ಯಗಳು, ಅಳಿವಿನಂಚಿನಲ್ಲಿರುವ ೧೨೯ ಜೀವವೈವಿಧ್ಯಗಳು, ತೀರಾ ಸೂಕ್ಷ್ಮ ಸ್ಥಿತಿಯಲ್ಲಿರುವ ೫೧ ಬಗೆಯ ಜೀವ ಜಂತುಗಳನ್ನು ಸಂರಕ್ಷಿಸಬೇಕಿದೆ ಎಂದು ಹೇಳಿದರು.

ಇಷ್ಟಕ್ಕೂ ನದಿ ತಿರುವು ಯೋಜನೆಯಿಂದ ನಮ್ಮ ಜಿಲ್ಲೆಗೇನೂ ಲಾಭವಿಲ್ಲ. ಈಗಾಗಲೇ ಯೋಜನಾಭಾರದಿಂದ ನಲುಗಿರುವ ಉತ್ತರ ಕನ್ನಡ ಜಿಲ್ಲೆ ಪ್ರಯೋಗಶಾಲೆಯಾಗಬಾರದು. ಅಘನಾಶಿನಿ ನದಿ ತಿರುವು ಮಾತ್ರವಲ್ಲ, ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಗೂ ತೀವ್ರ ವಿರೋಧವಿದೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನದಲ್ಲಿ ಹೋರಾಟ ತೀವ್ರ ಸ್ವರೂಪದಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅಘನಾಶಿನಿ ನದಿ ಉಳಿವಿಗೆ ಕಂಕಣಬದ್ಧರಾಗಬೇಕು ಎಂದು ಎಂ.ಜಿ. ಭಟ್ ಮನವಿ ಮಾಡಿದರು.

ಸಂತೆಗುಳಿ ಪಂಚಾಯಿತಿ ಮಾಜಿ ಸದಸ್ಯ ವಿನಾಯಕ ಭಟ್ ಮಾತನಾಡಿ, ಸಿಂಗಳೀಕ ಸಂರಕ್ಷಣೆಯ ಕಾರಣಕ್ಕೆ ಹಳ್ಳಿ ಜನರಿಗೆ ಬೆಟ್ಟಕ್ಕೆ ಒಣ, ಸೊಪ್ಪು ಸೌದೆಗಾಗಿ ಹೋಗುವುದಕ್ಕೂ ಅರಣ್ಯ ಇಲಾಖೆ ಬಿಡುವುದಿಲ್ಲ. ಹೀಗಿರುವಾಗ ಇಂಥ ದೊಡ್ಡ ಯೋಜನೆಗಳಿಗೆ ಹೇಗೆ ಅವಕಾಶ ಕೊಡುತ್ತದೆ. ಕುಮಟಾ-ಹೊನ್ನಾವರ ಮರಾಕಲ್ ಕುಡಿಯುವ ನೀರಿನ ಯೋಜನೆಗೇ ಪ್ರತಿವರ್ಷ ಏಪ್ರಿಲ್ ಬಳಿಕ ನೀರಿಲ್ಲದೇ ಪರದಾಡುತ್ತಾರೆ. ನದಿಯಲ್ಲಿ ನೀರಿನ ಲಭ್ಯತೆ ನೋಡದೇ ಯೋಜನೆ ಹೇರಿದರೆ ಜನರು ಸಾಯಬೇಕಾಗುತ್ತದೆ. ಹೀಗಾಗಿ ಪಕ್ಷಾತೀತವಾದ ಬೃಹತ್ ಹೋರಾಟ ಅನಿವಾರ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಮತಾ ನಾಯ್ಕ, ಗಣೇಶ ಅಂಬಿಗ, ಮಹಾಬಲೇಶ್ವರ ನಾಯ್ಕ, ಗಣಪಯ್ಯ ಅಂಬಿಗ, ಸತೀಶ ಮಹಾಲೆ, ಮಹಾಬಲೇಶ್ವರ ಅಂಬಿಗ, ವಿನೋದ ಅಂಬಿಗ, ರಾಮಾ ಅಂಬಿಗ, ಜ್ಞಾನೇಶ ಅಂಬಿಗ, ಗಂಗಾಧರ ಅಂಬಿಗ, ಚಿನ್ಮಯ ಕಾಮತ ಇತರರು ಇದ್ದರು.