ಸಾರಾಂಶ
ರೈತರಿಗೆ ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರ್ಕಾರಗಳೇ ಜವಾಬ್ದಾರಿ. ಬೆಳೆವಿಮೆ ಪರಿಹಾರ ನೀಡುವಲ್ಲಿ ತಾಲೂಕಿನ ರೈತರಿಗೆ ವಿಮಾ ಕಂಪನಿಯವರಿಂದ ಅನ್ಯಾಯವಾಗಿದೆ.
ನವಲಗುಂದ: ಈ ವರ್ಷದಲ್ಲೂ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಬೆಳೆವಿಮೆ, ಬೆಳೆಹಾನಿ ಪರಿಹಾರ ಸ್ಥಾನಿಕವಾಗಿ ಪರಿಶೀಲಿಸಿ ಯೋಗ್ಯ ಪರಿಹಾರಕ್ಕೆ ಆಗ್ರಹಿಸಿ ರೈತ ಹೋರಾಟಗಾರರು ಹಾಳಾದ ಬೆಳೆ ಸಮೇತ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಮಲಪ್ರಭಾ, ಮಹದಾಯಿ, ಕಳಸಾ- ಬಂಡೂರಿ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿಯಿಂದ ತಹಸೀಲ್ದಾರ್ ಕಚೇರಿಗೆ ಬೆಳೆ ಸಮೇತ ಆಗಮಿಸಿದ ಹೋರಾಟಗಾರರು, ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ರೈತರಿಗೆ ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರ್ಕಾರಗಳೇ ಜವಾಬ್ದಾರಿ. ಬೆಳೆವಿಮೆ ಪರಿಹಾರ ನೀಡುವಲ್ಲಿ ತಾಲೂಕಿನ ರೈತರಿಗೆ ವಿಮಾ ಕಂಪನಿಯವರಿಂದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2024-25 ರಲ್ಲಿ ಎನ್ ಡಿಆರ್ ಎಫ್ -ಎಸ್ ಡಿಆರ್.ಎಫ್ ಮಾರ್ಗಸೂಚಿ ಪ್ರಕಾರ ಬೆಳೆಹಾನಿ ಪರಿಹಾರದಲ್ಲಿ ತಾರತಮ್ಯವಾಗಿದ್ದು, ಬಾಕಿ ಉಳಿದ ರೈತರಿಗೆ ಪರಿಹಾರ ಹಣ ನೀಡಬೇಕು ಎಂದರು.ನಂತರ ರೈತ ಮುಖಂಡ ರಘುನಾಥ ನಡುವಿನಮನಿ ಮಾತನಾಡಿ, ಬೆಳೆಹಾನಿ ಹಾಗೂ ವಿಮೆ ಬಗ್ಗೆ ಈಗ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಅನೇವರಿ ಮಾಡುತ್ತಿದ್ದು ಸರಿಯಲ್ಲ, ಮಳೆಗೆ ಹೆಸರು ಕಾಳುಗಳು ಹಸಿಯಾಗಿದ್ದು ತೂಕ ಬರುತ್ತೆ. ಕಾಳು ಒಣಗಿದ ಮೇಲೆ ಅನೇವರಿ ಮಾಡಿ ಎಷ್ಟು ಹಾನಿಯಾಗಿದೆ ಎಂದು ತಿಳಿಯುತ್ತದೆ ಎಂದರು.
ಈ ವೇಳೆ ಮೈಲಾರಪ್ಪ ವೈದ್ಯ, ದೇವೇಂದ್ರಪ್ಪ ಗುಡಿಸಾಗರ, ಮಲ್ಲಿಕಾರ್ಜುನಗೌಡ್ರ ಗೊಬ್ಬರಗುಂಪಿ, ದ್ಯಾಮನಗೌಡ ಪಾಟೀಲ, ಬಿ.ಸಿ. ಪಾಟೀಲ, ಬಸವಂತಪ್ಪ ಹಡಪದ, ವೀರಯ್ಯ ಹಿರೇಮಠ, ತಿಪ್ಪಣ್ಣ ಸಾಲಿ, ಸಿದ್ದಪ್ಪ ಪೂಜಾರ, ಯಲ್ಲಪ್ಪ ಪೂಜಾರ, ನಿಂಗಪ್ಪ ಬಡಿಗೇರ ಸೇರಿದಂತೆ ಅನೇಕ ರೈತರಿದ್ದರು.