ಧರ್ಮಸ್ಥಳ ಕ್ಷೇತ್ರಕ್ಕೆ ಕಳಕ ತರಲು ಯತ್ನ: ಪ್ರತಿಭಟನೆ

| Published : Aug 13 2025, 12:30 AM IST

ಸಾರಾಂಶ

ಧರ್ಮಸ್ಥಳ ಒಂದು ಶ್ರದ್ಧಾಕೇಂದ್ರ, ಮಂಜುನಾಥ ಸ್ವಾಮಿಯನ್ನು ಅಸಂಖ್ಯಾತ ಹಿಂದೂಗಳು ಆರಾಧಿಸುತ್ತಾರೆ, ಯಾರೋ ಒಬ್ಬರು ಶವಗಳನ್ನು ಹೂತಿದ್ದಾಗಿ ಹೇಳಿದ ಬಳಿಕ ಎಸ್​ಐಟಿ ರಚನೆಯಾಗಿ ತನಿಖೆ ಶುರುವಾಗಿದೆ. ಅದಕ್ಕೆ ನಮ್ಮ ವಿರೋಧವೇನೂ ಇಲ್ಲ, ಆದರೆ 16 ಕಡೆ ಅಗೆದರೂ ಒಂದು ಪುರುಷ ಅಸ್ಥಿಪಂಜರ ಮಾತ್ರ ಸಿಕ್ಕಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಡಿನ ಶ್ರೇಷ್ಠ ಪುಣ್ಯಕ್ಷೇತ್ರ ಧರ್ಮಸ್ಥಳವನ್ನು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರನ್ನು ನಿರಂತರವಾಗಿ ತೇಜೋವಧೆ ಮಾಡಿ ಕಳಂಕ ತರುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳು ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಜನಾಗ್ರಹ ಸಭೆ ನಡೆಸಿದರು, ಮರುಳ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಎಂಜಿ ರಸ್ತೆ ಮೂಲಕ ಬಿಬಿ ರಸ್ತೆಯ ಅಂಬೇಡ್ಕರ್ ವೃತ್ತದವರೆಗೆ ಸಾಗಿ ನಂತರ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿನಿರ್ಮಿಸಿ ನಂತರ ಜನಾಗ್ರಹ ಸಭೆ ನಡೆಸಲಾಯಿತು.

ಒಂದು ಅಸ್ಥಿಪಂಜರ ಪತ್ತೆ

ಸಭೆಯನ್ನು ಉದ್ದೇಶಿಸಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ಧರ್ಮಸ್ಥಳ ಒಂದು ಶ್ರದ್ಧಾಕೇಂದ್ರ, ಮಂಜುನಾಥ ಸ್ವಾಮಿಯನ್ನು ಅಸಂಖ್ಯಾತ ಹಿಂದೂಗಳು ಆರಾಧಿಸುತ್ತಾರೆ, ಯಾರೋ ಒಬ್ಬರು ಶವಗಳನ್ನು ಹೂತಿದ್ದಾಗಿ ಹೇಳಿದ ಬಳಿಕ ಎಸ್​ಐಟಿ ರಚನೆಯಾಗಿ ತನಿಖೆ ಶುರುವಾಗಿದೆ. ಅದಕ್ಕೆ ನಮ್ಮ ವಿರೋಧವೇನೂ ಇಲ್ಲ, ಆದರೆ 16 ಕಡೆ ಅಗೆದರೂ ಒಂದು ಪುರುಷ ಅಸ್ಥಿಪಂಜರ ಮಾತ್ರ ಸಿಕ್ಕಿದೆ ಎಂದರು.

ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ಮತ್ತು ತನ್ನ ಸ್ವಾರ್ಥಕ್ಕಾಗಿ ನಮ್ಮೆಲ್ಲರ ಪವಿತ್ರ ಕ್ಷೇತ್ರವನ್ನು ಮತ್ತು ಹೆಗ್ಗಡೆಯವರನ್ನು ನಿರಂತರವಾಗಿ ತೇಜೋವಧೆ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮುಂತಾದ ಕಿಡಿಗೇಡಿಗಳನ್ನು ಬಂಧಿಸಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಹೋರಾಟ ಆರಂಭಿಸುವ ಎಚ್ಚರಿಕೆ

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ವಕೀಲ ಮುನೇಗೌಡ ಮಾತನಾಡಿ, ಕ್ಷೇತ್ರದ ವಿರುದ್ಧ ಸಂಚು ರೂಪಿಸುತ್ತಿರುವ ಮತ್ತು ಕ್ಷೇತ್ರದ ಪವಿತ್ರತೆಗೆ ಕಳಂಕ ತರುತ್ತಿರುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ.ಈ ಕಿಡಿಗೇಡಿಗಳು ಇದೇ ರೀತಿ ತಮ್ಮ ಚಾಳಿಯನ್ನು ಮುಂದುವರಿಸಿದಲ್ಲಿ ನಾಡಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಧರ್ಮಸ್ಥಳದ ಬಗ್ಗೆ ಈ ಭಾಗದ ಮತ್ತು ವಿಶ್ವದ ಸಾಕಷ್ಟು ಜನರಲ್ಲಿ ಭಕ್ತಿ, ಧರ್ಮದ ಅಂದರೆ ನ್ಯಾಯದ ಸಂಕೇತವಾಗಿ ಉಳಿದಿದೆ. ಎಲ್ಲಿಯೂ ಸಿಗದ ನ್ಯಾಯ ಅಲ್ಲಿ ದೊರೆಯುತ್ತದೆ. ತಪ್ಪು ಮಾಡಿದ ಯಾರೇ ಆಗಲಿ ಹಿಂದೆಯೂ ಮತ್ತು ಈಗಲೂ ಪ್ರಮಾಣಮಾಡಲು ಹಿಂಜೆರಿಯುತ್ತಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಸಾಕಷ್ಟು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದರು.

ಧಗ್ರಾ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯ

ಧಗ್ರಾ ಯೋಜನೆ ಹೆಸರಿನಲ್ಲಿ ಗ್ರಾಮೀಣ ಭಾಗದ ಕೆರೆ, ದೇವಾಲಯ ಅಭಿವೃದ್ದಿ, ಮದ್ಯವರ್ಜನಾಶಿಭಿರ, ಸ್ತ್ರೀಶಕ್ತಿ ಸಂಘಗಳ ಸ್ಥಾಪನೆ ಮಾಡಿ ಬಡ ಮತ್ತು ಮದ್ಯಮ ವರ್ಗಗಳ ಆರ್ಥಿಕ ಸುಧಾರಣೆ, ಆರೋಗ್ಯ ಶಿಭಿರ, ಶಸ್ತ್ರ ಚಿಕಿತ್ಸಾವೆಚ್ಚಗಳನ್ನೂ ನೀಡಿ ಸಾಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಧರ್ಮಸ್ಥಳ ನಮ್ಮೆಲ್ಲರ ಪವಿತ್ರ ಕ್ಷೇತ್ರ.ಈ ಕ್ಷೇತ್ರಕ್ಕೆ ಕಳಂಕ ತರುವವರ ವಿರುದ್ಧ ಜಾತ್ಯತೀತವಾಗಿ ಪಕ್ಷಾತೀತವಾಗಿ ಹೋರಾಡೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಉದ್ಯಮಿ ರವಿ ಅಂಗರೇಕನಹಳ್ಳಿ, ಚಿಂತಾಮಣಿಯ ಉದ್ಯಮಿ ಕುಪೇಂದ್ರಪ್ಪ, ಗೌರಿಬಿದನೂರಿನ ಮಾರ್ಕೆಟ್ ಮೋಹನ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀರಾಮೇಗೌಡ ಮತ್ತಿತರರು ಮಾತನಾಡಿ, ಧರ್ಮಸ್ಥಳದಲ್ಲಿ ನಡೆಸುತ್ತಿರುವ ಉತ್ಖನನವನ್ನು ಖಂಡಿಸಿದರು.

ಅಪರ ಡಿಸಿಗೆ ಮನವಿ ಸಲ್ಲಿಕೆ

ಪ್ರತಿಭಟನೆಯ ನಂತರ ಜಿಲ್ಲಾ ಪ್ರಜಾಸೌಧ ಭವನಕ್ಕೆ ತೆರಳಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್.ಬಾಸ್ಕರ್ ರವರಿಗೆ ಮನವಿ ಸಲ್ಲಿಸಿ, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು,ವಿವಿಧ ಜಾತಿ, ಧರ್ಮಗಳ ಮುಖಂಡರು,ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು,ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಕಾರ್ಯಕರ್ತರು, ಜೈನ ಸಮುದಾಯದ ಮುಖಂಡರು, ಸಾವಿರಾರು ಮಂದಿ ಮಂದಿ ಇದ್ದರು.