ಕನ್ನಡಪ್ರಭ ವಾರ್ತೆ ಹಾಸನ
ದೇಶಾದ್ಯಂತ ಸ್ಕೀಮ್ (ಸರ್ಕಾರದ ಹಲವು ಯೋಜನೆಗಳಡಿ ಕೆಲಸ ಮಾಡುತ್ತಿರುವವರು) ನೌಕರರ ಕರಾಳ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂಘದ ನೇತೃತ್ವದಲ್ಲಿ ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಕೀಮ್ ನೌಕರರ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿದ್ದು, ಐಸಿಡಿಎಸ್ ಮತ್ತು ಅಕ್ಷರ ದಾಸೋಹ ಯೋಜನೆಗಳನ್ನು ದುರ್ಬಲಗೊಳಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸ್ಕೀಮ್ ನೌಕರರ ಪ್ರತಿಭಟನೆಯ ನೇತೃತ್ವವನ್ನು ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷೆ ಎಂ.ಬಿ. ಪುಷ್ಪ ಮಾಧ್ಯಮದೊಂದಿಗೆ ಮಾತನಾಡಿ, ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸದೆ ಕಡಿಮೆ ಮಾಡುತ್ತಿರುವುದರಿಂದ ಮಕ್ಕಳ ಪೌಷ್ಟಿಕ ಆಹಾರ ಮತ್ತು ಅಂಗನವಾಡಿ ಸೇವೆಗಳ ಗುಣಮಟ್ಟ ಕುಸಿಯುತ್ತಿದೆ ಎಂದು ಆರೋಪಿಸಿದರು. ೨೦೧೭ರಿಂದ ಪೌಷ್ಟಿಕ ಆಹಾರದ ಘಟಕ ವೆಚ್ಚ ಹೆಚ್ಚಳವಾಗದಿರುವುದು ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ೩ರಿಂದ ೬ ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಕೇಂದ್ರಗಳ ಅಸ್ತಿತ್ವವೇ ಪ್ರಶ್ನಾರ್ಥಕವಾಗುತ್ತಿದೆ. ರಾಜ್ಯ ಸರ್ಕಾರ ೧೦ ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವುದಾಗಿ ಘೋಷಿಸಿದ್ದರೂ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದು ಖಂಡನೀಯ ಎಂದರು.ಸ್ಥಳೀಯವಾಗಿ ತಯಾರಿಸುವ ತಾಜಾ ಪೌಷ್ಟಿಕ ಆಹಾರದ ಬದಲಿಗೆ ಪ್ಯಾಕೆಟ್ ಆಹಾರ, ನಗದು ವರ್ಗಾವಣೆ ಹಾಗೂ ಕಾರ್ಪೊರೇಟ್ ಮಾದರಿಯ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಮಕ್ಕಳಿಗೆ ಉತ್ತಮ ಗುಣಮಟ್ಟದ ಸ್ಥಳೀಯ ಆಹಾರವನ್ನೇ ನಿರಂತರವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು. ೨೦೧೧ರಿಂದ ನಿವೃತ್ತರಾದ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಬಿಡುಗಡೆ ಮಾಡಬೇಕು. ಅವರನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ತರಬೇಕು. ೪೫ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ದೇಶಾದ್ಯಂತ ಏಕರೂಪ ಸೇವಾ ನಿಯಮ, ವಾರ್ಷಿಕ ವೇತನ ಹೆಚ್ಚಳ, ವೈದ್ಯಕೀಯ ರಜೆ, ಬಡ್ತಿ ಅವಕಾಶ ಸೇರಿದಂತೆ ಎಲ್ಲಾ ಸೇವಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಗ್ಯಾಸ್ ಸಂಪರ್ಕ, ಆಧುನಿಕ ಅಡುಗೆ ಸಲಕರಣೆಗಳು, ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಆಟಿಕೆಗಳು, ಬಾಡಿಗೆ ಕಟ್ಟಡಗಳಿಗೆ ಮಾರುಕಟ್ಟೆ ದರದ ಬಾಡಿಗೆ, ಹೊಸದಾಗಿ ಆರಂಭಿಸಿರುವ ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಎಲ್ಲ ಮೇಲ್ವಿಚಾರಕರ ಹುದ್ದೆಗಳನ್ನು ಬಡ್ತಿಯ ಮೂಲಕವೇ ಭರ್ತಿ ಮಾಡುವಂತೆ ಒತ್ತಾಯಿಸಲಾಯಿತು.ಇದೇ ವೇಳೆ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಸಹ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅಕ್ಷರ ದಾಸೋಹ ಯೋಜನೆ ಆರಂಭವಾಗಿ ೨೫ ವರ್ಷಗಳಾದರೂ ನೌಕರರ ವೇತನ ಹಾಗೂ ಸೌಲಭ್ಯಗಳಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಆಗಿಲ್ಲ. ಕೇಂದ್ರ ಸರ್ಕಾರ ಅನುದಾನ ಹೆಚ್ಚಿಸದೆ ಯೋಜನೆಯನ್ನು ದುರ್ಬಲಗೊಳಿಸುತ್ತಿದ್ದು, ಖಾಸಗಿ ಸಂಸ್ಥೆಗಳಿಗೆ ಯೋಜನೆಯ ಜವಾಬ್ದಾರಿ ನೀಡಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಆರೋಪಿಸಿದರು ಇತರೆ ಬೇಡಿಕೆಗಳ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸರ್ಕಾರಗಳು ತಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳು ಬಾರದೆ ಇದ್ದಾಗ ಡಿಸಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ತಿಳಿಗೊಳಿಸಿದರು. ಪ್ರತಿಭಟನೆಯಲ್ಲಿ ಸ್ಕೀಮ್ ನೌಕರರ ಪ್ರತಿಭಟನೆಯ ನೇತೃತ್ವವನ್ನು ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎಂಬಿ. ಪುಷ್ಪ , ಉಪಾಧ್ಯಕ್ಷರಾದ ಕಾಮಾಕ್ಷಿರಾಜು, ಕೆಪಿ. ವೀಣಾ ಪ್ರಧಾನ ಕಾರ್ಯದರ್ಶಿ ಎಂ.ಮಂಜುಳಾ, ಕಾರ್ಯದರ್ಶಿ ಟಿ ಎಚ್. ಜಯಂತಿ , ರಿಹಾನಾಬಾನು, ಎಸ್.ಎಸ್. ಪೂರ್ಣಿಮಾ, ಖಜಾಂಚಿ ಜಿಪಿ. ಶೈಲಾ ಬಿಸಿಯೂಟ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷರಾದ ಜಿವಿ.ಉಷಾ, ಉಪಾಧ್ಯಕ್ಷರಾದ ಮೀನಾಕ್ಷಿ , ಯಶೋಧ, ಪ್ರಧಾನ ಕಾರ್ಯದರ್ಶಿ ಅರವಿಂದ ಯಶೋಧ, ಸುಮಾ, ಜ್ಯೋತಿ, ನಾಸೀರಾಬಾನು, ಹೆಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ ಇನ್ನಿತರರು ಭಾಗವಹಿಸಿದ್ದರು.
===ಫೋಟೋ:
ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅಂಗನವಾಡಿ ಹಾಗೂ ಅಕ್ಷರ ದಾಸೋಹ ನೌಕರರಿಂದ ಪ್ರತಿಭಟನೆ ನಡೆಸಲಾಯಿತು.